ವಿದೇಶ

ಇಟಲಿ ಭೂಕಂಪದ ಬಗ್ಗೆ ಚಾರ್ಲಿ ಹೆಬ್ಡೊ ವ್ಯಂಗ್ಯಚಿತ್ರಕ್ಕೆ ವ್ಯಾಪಕ ಟೀಕೆ

Guruprasad Narayana
ಪ್ಯಾರಿಸ್: ಇತ್ತೀಚಿಗೆ ಇಟಲಿಯಲ್ಲಿ ಸಂಭವಿಸಿದ ಭೂಕಂಪದ ಸಂತ್ರಸ್ತರನ್ನು ಪಾಸ್ತಾ ಅಡುಗೆಯಂತೆ ಚಿತ್ರಿಸಿದ ವಿಡಂಬನಾ ಫ್ರೆಂಚ್ ಪತ್ರಿಕೆ ಚಾರ್ಲಿ ಹೆಬ್ಡೊ ವ್ಯಂಗ್ಯಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. 
ಫ್ರೆಂಚ್ ಪ್ರಕಟಣೆಯ ಪತ್ರಿಕೆಯ ಇತ್ತೀಚಿನ ಆವೃತ್ತಿಯಲ್ಲಿ "ಇಟಲಿ ಶೈಲಿಯ ಭೂಕಂಪನ" ಎಂಬ ಶೀರ್ಷಿಕೆಯಡಿ, ವಿವಿಧ ತೀವ್ರತೆಯಲ್ಲಿ ಗಾಯಗೊಂಡ ಸಂತ್ರಸ್ತರನ್ನು ವಿವಿಧ ಇಟಾಲಿಯನ್ ತಿಂಡಿಗಳಾಗಿ ಬಿಂಬಿಸಿ ವ್ಯಂಗ್ಯಚಿತ್ರ ಬಿಡಿಸಲಾಗಿದೆ. 
ತೀವ್ರ ರಕ್ತಸ್ರಾವದಿಂದ ನರಳುತ್ತಿರುವ ಸಂತ್ರಸ್ತನನ್ನು 'ಟೊಮೊಟೊ ಸಾಸ್ ನೊಂದಿಗಿನ ಪೆನ್ನೆ' ತಿಂಡಿ ಎಂದು ಬಿಂಬಿಸಲಾಗಿದೆ. 
"ಇದು ಪ್ರೆಂಚ್ ಜನತೆಯ ನಿಜ ಭಾವನೆಯನ್ನು ಸೂಚಿಸುತ್ತಿಲ್ಲ ಎಂದು ನಂಬುತ್ತೇನೆ" ಎಂದಿರುವ ಇಟಲಿ ನಗರ ಅಮಾಟ್ರಿಸ್ ನ ಮೇಯರ್ ಸೆರ್ಗಿಯೋ ಪಿರೋಜ್ಜಿ "ವಿಡಂಬನೆಗೆ ಎಂದಿಗೂ ಸ್ವಾಗತ, ಆದರೆ ದುರಂತ ಮತ್ತು ಸಾವನ್ನು ವ್ಯಂಗ್ಯ ಮಾಡುವುದು ಸರಿಯಲ್ಲ" ಎಂದು ಅವರು ಹೇಳಿದ್ದಾರೆ. 
ಅಮಾಟ್ರಿಸ್ ನಗರದಲ್ಲಿ ನಡೆದ ಭೂಕಂಪದಿಂದ 180 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. 
ಇಟಲಿ ಭೂಕಂಪದಲ್ಲಿ 300 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಇದನ್ನು ಹಾಸ್ಯ ಮಾಡಿದ ಚಾರ್ಲಿ ಹೆಬ್ಡೊ ಪತ್ರಿಕೆಯ ವಿರುದ್ಧ ಟ್ವಿಟ್ಟರ್ ಮತ್ತು ಇತರ ಸಾಮಾಜಿಕ ಜಾಲತಾಣದ ಬಳಕೆದಾರರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. 
"ಅವರು ತಮ್ಮ ವಿಡಂಬನೆಯ ಹಿಂದೆ ಅಡಗಿಕೊಳ್ಳುತ್ತಾರೆ. ನಿಮ್ಮ ಕಚೇರಿ ತೊರೆಯಿರಿ, ಎಲ್ಲವನ್ನು ಕಳೆದುಕೊಂಡವರ ಮುಂದೆ ಬಂದು ನಿಲ್ಲಿ" ಎಂದು ಟ್ವಿಟ್ಟರ್ ಬಳೆಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ. 
"ಇದು ವಿಡಂಬನೆಯಲ್ಲ. ಜೀವ ಕಳೆದುಕೊಂಡವರ ಬಗ್ಗೆ ತೋರಿದ ಅಗೌರವ. ಅಸಹ್ಯವಾಗುತ್ತಿದೆ" ಎಂದು ಮತ್ತೊಬ್ಬರು ಬರೆದಿದ್ದಾರೆ. 
ಈ ಹಿಂದೆ ಕೂಡ 2015 ರಲ್ಲಿ ಬೀಚಿನಲ್ಲಿ ಕೊಚ್ಚಿಹೋದ ಸಿರಿಯಾದ ನಿರಾಶ್ರಿತ ಬಾಲಕ ಅಲಾನ್ ಕುರ್ದಿ ಬಗ್ಗೆ ವಿವಾದಾತ್ಮಕ-ಅವಹೇಳನ ಕಾರ್ಟುನ್ ಪ್ರಕಟಿಸಿದ್ದಕ್ಕೆ ಚಾರ್ಲಿ ಹೆಬ್ಡೊ ವಿರುದ್ಧ ಜನ ಕುಪಿತಗೊಂಡಿದ್ದರು. 
SCROLL FOR NEXT