ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತ ಇಸ್ರೇಲ್ ಗೆ ರಕ್ಷಣಾ ನೆರವನ್ನು ಹೆಚ್ಚಿಸಿದೆ.
ಯುಎಸ್ ಕಾಂಗ್ರೆಸ್ ಹಾಗೂ ಆಡಳಿತ ವರ್ಗದ ಮಾಹಿತಿಯ ಪ್ರಕಾರ ಇಸ್ರೇಲ್ ಗೆ ನೀಡಲಾಗುತ್ತಿರುವ ರಕ್ಷಣಾ ನೆರವನ್ನು ಹೆಚ್ಚಿಸಲಾಗಿದ್ದು, 10 ವರ್ಷಗಳ ವರೆಗೆ 38 ಬಿಲಿಯನ್ ಡಾಲರ್ ನೆರವನ್ನು ಇಸ್ರೇಲ್ ಪಡೆಯಲಿದೆ. 2018 ಕ್ಕೆ ಅಮೆರಿಕ ಇಸ್ರೇಲ್ ಗೆ ನೀಡುವ ರಕ್ಷಣಾ ನೆರವಿನ ಒಪ್ಪಂದದ ಅವಧಿ ಮುಕ್ತಾಯಗೊಳ್ಳಲಿದ್ದು ಇಸ್ರೇಲ್ ಗೆ ನೀಡಲಾಗುತ್ತಿರಿಯುವ ರಕ್ಷಣಾ ನೆರವಿನಲ್ಲಿ 30 ಬಿಲಿಯನ್ ಡಾಲರ್ ಏರಿಕೆ ಮಾಡಲಾಗಿದೆ.
ರಕ್ಷಣಾ ನೆರವಿಗೆ ಸಂಬಂಧಿಸಿದಂತೆ ಇಸ್ರೇಲ್ ಹಾಗೂ ಅಮೆರಿಕ ರಕ್ಷಣಾ ಇಲಾಖೆಯ ನಡುವೆ ಸೆ.14 ರಂದು ಒಪ್ಪಂದ ನಡೆಯಲಿದೆ. ಹಲವು ತಿಂಗಳ ಮಾತುಕತೆ ಬಳಿಕ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. ಇಸ್ರೇಲ್ ಇರಾನ್ ನೊಂದಿಗಿನ ಪರಮಾಣು ಒಪ್ಪಂದ ಮಾಡಿಕೊಂಡ ನಂತರದ ಬೆಳವಣಿಗೆಯಿಂದ ಅಮೆರಿಕ ಇಸ್ರೇಲ್ ನಡುವಿನ ಸಂಬಂಧ ಹದಗೆಟ್ಟಿತ್ತು. ಇರಾನ್ ವಿಷಯಗಳಲ್ಲಿ ಅಥವಾ ನೀತಿ ವಿಷಯಗಳು ಎದುರಾದಾಗ ಅಮೆರಿಕ- ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ತಪ್ಪು ಕಲ್ಪನೆ ಹೊಂದಿರಬಾರದು, ಇಸ್ರೇಲ್ ನ ಭದ್ರತೆಗೆ ಅಮೆರಿಕ ಬದ್ಧವಾಗಿದೆ ಎಂದು ವಾಷಿಂಗ್ ಟನ್ ಇನ್ಸ್ ಟಿಟ್ಯೂಟ್ ಫಾರ್ ನಿಯರ್ ಈಸ್ಟ್ ಪಾಲಿಸಿಯ ನಿರ್ದೇಶಕ ಡೇವಿಡ್ ಮಾಕೊವ್ಸ್ ತಿಳಿಸಿದ್ದಾರೆ.