ವಿದೇಶ

ಪಾಕಿಸ್ತಾನ ದರ್ಗಾದಲ್ಲಿ ಘರ್ಷಣೆ: 20 ಮಾನಸಿಕ ರೋಗಿಗಳ ಹತ್ಯೆಗೈದ ಮೇಲ್ವಿಚಾರಕರು

Manjula VN
ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ದರ್ಗಾವೊಂದರಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟು, ಮೇಲ್ವಿಚಾರಕರೇ 20ಕ್ಕೂ ಹೆಚ್ಚು ಮಾನಸಿಕ ರೋಗಿಗಳನ್ನು ಹತ್ಯೆ ಮಾಡಿರುವ ಘಟನೆ ಭಾನುವಾರ ನಡೆದಿದೆ. 
ಸರ್ಗೊಧಾ ಜಿಲ್ಲೆಯ ಮುಹಮ್ಮದ್ ಅಲಿ ಗುಜ್ಜಾರ್ ಗ್ರಾಮದಲ್ಲಿರುವ ದರ್ಗಾದಲ್ಲಿ ಶನಿವಾರ ತಡರಾತ್ರಿ ಘಟನೆ ನಡೆದಿದೆ ಎಂದು ಉಪ ಪೊಲೀಸ್ ಆಯುಕ್ತ ಲಿಯಾಕಟ್ ಅಲಿ ಛಾಥಾ ಹೇಳಿದ್ದಾರೆ. 
ದರ್ಗಾಗೆ ಭೇಟಿ ನೀಡಿದವರಿಗೆ ಮೊದಲು ಮೇಲ್ವಿಚಾರಕರು ಔಷಧಿಗಳನ್ನು ನೀಡಿದ್ದಾರೆ. ನಂತರ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆಂದು ಛಾಥಾ ಹೇಳಿದ್ದಾರೆ. 
ಪ್ರಸ್ತುತ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಘಟನೆಗೆ ಪ್ರಮುಖ ಕಾರಣಗಳ ಕುರಿತಂತೆ ತನಿಖೆ ನಡೆಸಲಾಗುತ್ತಿದೆ. ದರ್ಗಾದ ಮೇಲ್ವಿಚಾರಕರು ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ. 
ಘಟನೆಯಲ್ಲಿ ಗಾಯಗೊಂಡ 4 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ. 
ದರ್ಗಾಗೆ ಭೇಟಿ ನೀಡುವವರಿಗೆ ಅವರಲ್ಲಿರುವ ಕಷ್ಟಗಳನ್ನು ಮೇಲ್ವಿಚಾರಕರು ದೂರ ಮಾಡುತ್ತಾರೆ. ಆದರೆ, ಈ ಘಟನೆಯಲ್ಲಿ ಮೇಲ್ವಿಚಾರಕರೇ ರೋಗಿಗಳಿಗೆ ಔಷಧಿಗಳನ್ನು ನೀಡಿ ಹತ್ಯೆ ಮಾಡಿದ್ದಾರೆ. ಗಾಯಾಳುವೊಬ್ಬರು ಘಟನೆ ಕುರಿತಂತೆ ಹೇಳಿಕೆಯೊಂದನ್ನು ನೀಡಿದ್ದು, ಮೇಲ್ವಿಚಾರಕರ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು. ಈ ವೇಳೆ ಮೇಲ್ವಿಚಾರಕರು ಮಾರಾಕಾಸ್ತ್ರಗಳಿಂದ ರೋಗಿಗಳ ಮೇಲೆ ದಾಳಿ ಮಾಡಿದರು ಎಂದು ಹೇಳಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ಬಿಲಾಲ್ ಇಫ್ತಿಖಾರ್ ತಿಳಿಸಿದ್ದಾರೆ. 
SCROLL FOR NEXT