ವಿದೇಶ

ಜಾಧವ್‌ ಗಲ್ಲು ಶಿಕ್ಷೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳದಿರಲು ಪಾಕ್ ಸೇನಾಧಿಕಾರಿಗಳು ನಿರ್ಧಾರ

Lingaraj Badiger
ಇಸ್ಲಾಮಾಬಾದ್: ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್‌ ಅವರ ಗಲ್ಲು ಶಿಕ್ಷೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಿರಲು ಪಾಕಿಸ್ತಾನಸೇನೆಯ ಉನ್ನತ ಅಧಿಕಾರಿಗಳು ಗುರುವಾರ ನಿರ್ಧರಿಸಿದ್ದಾರೆ.
ಇಂದು ರಾವಲ್ಪಿಂಡಿಯಲ್ಲಿರುವ ಸೇನಾ ಪ್ರಧಾನ ಕಚೇರಿಯಲ್ಲಿ ಸೇನಾ ಮುಖ್ಯಸ್ಥ ಜನರಲ್ ಖಮರ್‌ ಜಾವೇದ್‌ ಬಜ್ವಾ ನೇತೃತ್ವದಲ್ಲಿ ನಡೆದ ಕಮಾಂಡರ್‌ಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನ ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗದ (ಐಎಸ್‌ಪಿಆರ್‌) ಪ್ರಕಟಣೆ ತಿಳಿಸಿದೆ.
46 ವರ್ಷದ ಕುಲಭೂಷಣ್ ಜಾಧವ್‌ ಅವರಿಗೆ ಕಳೆದ ಮಂಗಳವಾರ ಪಾಕಿಸ್ತಾನದ ಸೇನಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಇದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪಾಕಿಸ್ತಾನ ಗಲ್ಲು ಶಿಕ್ಷೆ ಜಾರಿ ಮಾಡಿದಲ್ಲಿ ಅದನ್ನು ಪೂರ್ವಯೋಜಿತ ಕೊಲೆ ಎಂದು ಪರಿಗಣಿಸುವುದಾಗಿ ಹೇಳಿದೆ. ಅಲ್ಲದೆ, ಅದರಿಂದ ದ್ವಿಪಕ್ಷೀಯ ಬಾಂಧವ್ಯದ ಮೇಲೆ ಗಂಭೀರ ಪರಿಣಾಮವಾಗಲಿದೆ ಎಂದು ಎಚ್ಚರಿಸಿತ್ತು. ಆದರೆ ಭಾರತದ ಎಚ್ಚರಿಕೆಗೆ ಬಗ್ಗದ ಪಾಕಿಸ್ತಾನ ಸೇನೆ, ದೇಶ ದ್ರೋಹ ಕೃತ್ಯಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
SCROLL FOR NEXT