ವಿದೇಶ

ಉಗ್ರವಾದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಮಾರಣಾಂತಿಕ ಬೆದರಿಕೆ: ಡೊನಾಲ್ಡ್ ಟ್ರಂಪ್

Srinivas Rao BV
ವಾಷಿಂಗ್ ಟನ್: ಭಯೋತ್ಪಾದನೆ ಧಾರ್ಮಿಕ ಸ್ವಾತಂತ್ರ್ಯಕ್ಕೆ ಎದುರಾಗಿರುವ ಮಾರಣಾಂತಿಕ ಬೆದರಿಕೆ, ಆದರೂ ಸಹ ಭಯೋತ್ಪಾದನೆಯನ್ನು ಮೆಟ್ಟಿ ಹಿಂದೂಗಳು ಸೇರಿದಂತೆ ಎಲ್ಲಾ ಮತದ ಜನರು ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಪಾಲಿಸುವ ನಾಳೆಗಳು ಬರಲಿವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 
ವಾರಕ್ಕೊಮ್ಮೆ ಅಮೆರಿಕಾ ಅಧ್ಯಕ್ಷರು ರೆಡಿಯೋ ಹಾಗೂ ವೆಬ್ ಸೈಟ್ ನ ಮೂಲಕ ದೇಶವನ್ನುದ್ದೇಶಿಸಿ ಮಾತನಾಡುವ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕಾ ತನ್ನ ಪ್ರಾರಂಭದ ದಿನದಿಂದಲೂ ಸಹ ಧಾರ್ಮಿಕ ಸ್ವಾತಂತ್ರ್ಯವನ್ನು ಉತ್ತೇಜಿಸುತ್ತಾ ಪೋಷಿಸುತ್ತಿದೆ. ನಮ್ಮ ಪೂರ್ವಜರು, ಧೈರ್ಯಶಾಲಿ ಹೋರಾಟಾಗಾರರು ಶತಮಾನಗಳ ಹಿಂದೆ ನಮಗಾಗಿ ಧಾರ್ಮಿಕ ಸ್ವಾತಂತ್ರ್ಯವನ್ನು ಕಾಪಾಡಿದ್ದರು. ಆದರೆ ಈ ಧಾರ್ಮಿಕ ಸ್ವಾತಂತ್ರ್ಯ ಎಂಬುದು ವಿಶ್ವಾದ್ಯಂತ ಎಲ್ಲರಿಗೂ ಸಿಕ್ಕಿಲ್ಲ. ಭಯೋತ್ಪಾದನೆ ಧಾರ್ಮಿಕ ಸ್ವಾತಂತ್ರ್ಯಕ್ಕೆ ಮಾರಣಾಂತಿಕ ಬೆದರಿಕೆಯಾಗಿ ಕಾಡುತ್ತಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. 
ಈಸ್ಟರ್‌ ಹಬ್ಬದ ಅಂಗವಾಗಿ ಭಾನುವಾರ ವಿಶ್ವಾದ್ಯಂತ ಇರುವ ಕ್ರೈಸ್ತರು ಹೋಲಿ ವೀಕ್ ನ್ನು ಆಚರಿಸಿದ್ದರು. ಈ ವೇಳೆ ಈಜಿಪ್ಟ್ ನ ಚರ್ಚ್ ಗಳಲ್ಲಿ ಇಸೀಸ್ ಉಗ್ರ ಸಂಘಟನೆ ನಡೆಸಿದ ದಾಳಿಗೆ 45 ಜನರು ಬಲಿಯಾಗಿದ್ದರೆ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಈ ಕ್ರೂರ ದಾಳಿಯನ್ನು ನಾವು ಖಂಡಿಸುತ್ತೇವೆ. ಎಲ್ಲಾ ಧರ್ಮದವರೂ ಅವರ ನಂಬಿಕೆಗಳಿಗೆ ಅನುಗುಣವಾಗಿ ಧಾರ್ಮಿಕ ಸ್ವಾತಂತ್ರ್ಯವನ್ನು ಪಾಲಿಸುವ ನಾಳೆಗಳು ಬರಲಿವೆ ಎಂಬ ವಿಶ್ವಾಸವಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
SCROLL FOR NEXT