ಲಂಡನ್: ಮಹಿಳೆಯೊಬ್ಬಳ ಮೇಲೆ ಶೂಟೌಟ್ ಮಾಡಿರುವ ಲಂಡನ್ ಪೊಲೀಸರು ನಡೆಯಬಹುದಾಗಿದ್ದ ಭಯೋತ್ಪಾದಕ ದಾಳಿಯನ್ನು ತಪ್ಪಿಸಿರುವುದಾಗಿ ಹೇಳಿದ್ದಾರೆ.
ಉಗ್ರವಾದದೊಂದಿಗೆ ನಂಟಿದ್ದ ಮಹಿಳೆಯ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಭದ್ರತಾ ಪಡೆ ಸಿಬ್ಬಂದಿಗಳು ಲಂಡನ್ ನಗರದ ವಾಯುವ್ಯ ಭಾಗದಲ್ಲಿರುವ ವಿಲ್ಲೆಸ್ಡೆನ್ ನಗರದಲ್ಲಿನ ಮನೆಯೊಂದರ ಮೇಲೆ ದಾಳಿ ನಡೆಸಿದ್ದು, ಭಯೋತ್ಪಾದನೆಗೆ ನಂಟಿದ್ದ 6 ಜನ ಶಂಕಿತರನ್ನು ಬಂಧಿಸಿದ್ದಾರೆ.
ಬಂಧಿತರ ವಿಚಾರಣೆ ನಡೆಯುತ್ತಿದೆ. ಆದರೆ ಸಂಭವನೀಯ ದಾಳಿಯೊಂದನ್ನು ತಡೆಗಟ್ಟಿದ್ದೇವೆ ಎಂದು ಲಂಡನ್ ಪೊಲೀಸರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಗುರುವಾರ ಈ ಕಾರ್ಯಾಚರಣೆ ನಡೆದಿದ್ದು, ಇದರ ಮ್,ಉಂದಿನ ಭಾಗವಾಗಿ ಮತ್ತಷ್ಟು ಕಾರ್ಯಾಚರಣೆಗಳು ನಡೆದಿದ್ದು, ಮತ್ತೆ ಇಬ್ಬರನ್ನು ಬಂಧಿಸಲಾಗಿದೆ. ಈ ಹಿಂದೆ ಬ್ರಿಟೀಷ್ ಸಂಸತ್ ನ ಬಳಿಯಲ್ಲಿ ಬಂಧಿಸಲಾದ ವ್ಯಕ್ತಿಗೂ ಇಂದು ಬಂಧಿಸಲಾಗಿರುವ ವ್ಯಕ್ತಿಗಳಿಗೆ ಸಂಬಂಧವಿಲ್ಲ ಎಂದು ಲಂಡನ್ ಪೊಲೀಸರು ಮಾಹಿತಿ ನೀಡಿದ್ದಾರೆ.