ದರ್ಶನ್ ಲಾಲ್-ಶಾಹೀದ್ ಖಖಾನ್, ಅಬ್ಬಾಸಿ
ಇಸ್ಲಾಮಾಬಾದ್: 20 ವರ್ಷಗಳ ನಂತರ ಪಾಕಿಸ್ತಾನದ ನೂತನ ಸಂಪುಟದಲ್ಲಿ ಹಿಂದೂ ಸಚಿವರೊಬ್ಬರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪಾಕಿಸ್ತಾನದ ನೂತನ ಪ್ರಧಾನಿ ಶಾಹಿದ್ ಖಖಾನ್ ಅಬ್ಬಾಸಿ ಶುಕ್ರವಾರ ತಮ್ಮ ಸಂಪುಟ ವಿಸ್ತರಣೆ ಮಾಡಿದ್ದು ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಸಂಪುಟದಲ್ಲಿದ್ದ ಬಹುತೇಕ ಎಲ್ಲರೂ ನೂತನ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಹಿಂದೂ ಕೂಡ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
65 ವರ್ಷದ ದರ್ಶನ್ ಲಾಲ್ ಪಾಕಿಸ್ತಾನ ಸರ್ಕಾರದ ಮೊದಲ ಹಿಂದೂ ಸಚಿವರಾಗಿದ್ದಾರೆ. ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ಮೀರ್ ಪುರ್ ಮಥೆಲೋ ಪಟ್ಟಣದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು 2013ರಲ್ಲಿ ದರ್ಶನ್ ಅವರು ಅಲ್ಪಸಂಖ್ಯಾತರಿಗೆ ಮೀಸಲಾದ ಕ್ಷೇತ್ರದಿಂದ ಪಿಎಂಎಲ್-ಎನ್ ಟಿಕೆಟ್ ನಿಂದ ರಾಷ್ಟ್ರೀಯ ಅಸೆಂಬ್ಲಿಗೆ ಸತತ ಎರಡನೇ ಅವಧಿಗೆ ಚುನಾಯಿತರಾಗಿದ್ದರು.
ದರ್ಶನ್ ಲಾಲ್ ಅವರಿಗೆ ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳ ನಡುವಣ ಸಮನ್ವಯ ಹೊಣೆ ನೀಡಲಾಗಿದೆ. ಇನ್ನು ನವಾಜ್ ಷರೀಫ್ ಸರ್ಕಾರದಲ್ಲಿ ರಕ್ಷಣೆ ಮತ್ತು ವಿದ್ಯುತ್ ಸಚಿವರಾಗಿದ್ದ ಖ್ವಾಜಾ ಮುಹಮ್ಮದ್ ಆಸಿಫ್ ಅವರನ್ನು ನೂತನ ವಿದೇಶಾಂಗ ಸಚಿವರಾಗಿ ನೇಮಿಸಿಕೊಳ್ಳಲಾಗಿದೆ.