ಪಾಕಿಸ್ತಾನ ನೂತನ ವಿದೇಶಾಂಗ ಸಚಿವ ಖ್ವಾಜಾ ಆಸಿಫ್
ಇಸ್ಲಾಮಾಬಾದ್: ಶಾಂತಿ ಬೇಕಿದ್ದರೆ ಕಾಶ್ಮೀರ ವಿವಾದ ಕುರಿತು ಮಾತುಕತೆ ನಡೆಸಿ ಎಂದು ಭಾರತಕ್ಕೆ ಪಾಕಿಸ್ತಾನ ನೂತನ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಅವರು ಹೇಳಿದ್ದಾರೆ.
ಪಾಕಿಸ್ತಾನ ನೂತನ ವಿದೇಶಾಂಗ ಸಚಿವರಾಗಿ ನಿನ್ನೆ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿರುವ ಅವರು, ನೆರೆರಾಷ್ಟ್ರಗಳಾದ ಭಾರತ ಮತ್ತು ಅಫ್ಘಾನಿಸ್ತಾನದೊಂದಿಗೆ ಉತ್ತಮ ಸಂಬಂಧವನ್ನು ಪಾಕಿಸ್ತಾನ ಬಯಸುತ್ತದೆ. ಆದರೆ, ಈ ಎರಡೂ ರಾಷ್ಟ್ರಗಳು ಧನಾತ್ಮಕ ಪ್ರತಿಕ್ರಿಯೆಗಳನ್ನು ನೀಡುತ್ತಿಲ್ಲ. ಭಾರತ ಹಾಗೂ ಆಫ್ಘಾನಿಸ್ತಾನ ರಾಷ್ಟ್ರಗಳು ಪಾಕಿಸ್ತಾನದ ಉತ್ತಮ ನೆರೆರಾಷ್ಟ್ರವಾಗಲು ಇದು ಸಕಾಲವಾಗಿದ್ದು, ಪಾಕಿಸ್ತಾನದ ಶಾಂತಿಯುತ ಕರೆಗೆ ಉಭಯ ರಾಷ್ಟ್ರಗಳು ಧನಾತ್ಮಕ ಪ್ರತಿಕ್ರಿಯೆ ನೀಡಿ, ಆರೋಪ-ಪ್ರತ್ಯಾರೋಪಗಳ ಆಟಗಳನ್ನು ನಿಲ್ಲಿಸಬೇಕಿದೆ ಎಂದು ಹೇಳಿದ್ದಾರೆ.
ನಂತರ ಕಾಶ್ಮೀರ ವಿವಾದ ಸಂಬಂಧ ಭಾರತ ಹಾಗೂ ಪಾಕಿಸ್ತಾನದ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಕುರಿತಂತೆ ಮಾತನಾಡಿರುವ ಅವರು, ನಮ್ಮ ಗಡಿಯನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ. ಕಾಶ್ಮೀರ ಸಮಸ್ಯೆಯನ್ನು ಪರಿಹರಿಸುವ ಮೂಲಕವಷ್ಟೇ ಉಭಯ ರಾಷ್ಟ್ರಗಳ ನಡುವೆ ಶಾಶ್ವತವಾದ ಶಾಂತಿಯನ್ನು ಸಾಧಿಸಲು ಸಾಧ್ಯ. ಶಾಂತಿ ಬೇಕಿದ್ದರೆ ಕಾಶ್ಮೀರ ವಿವಾದ ಕುರಿತಂತೆ ಭಾರತ ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸಬೇಕು ಎಂದಿದ್ದಾರೆ.
ಇದೇ ವೇಳೆ ಉಗ್ರವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಬಹಳ ಹಿಂದಿನಿಂದಲೂ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತಿದೆ. ಪಾಕಿಸ್ತಾನ ಸೈನಿಕರ ತ್ಯಾಗ ಹಾಗೂ ಬಲಿದಾನಗಳ ಬಳಿಕ ಇದೀಗ ಉಗ್ರರ ಬೆದರಿಕೆಗಳು ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂದಿದೆ ಎಂದು ತಿಳಿಸಿದ್ದಾರೆ.