ಟೋಕಿಯೋ: ಜಪಾನ್ ನ ಫುಕುಶಿಮಾ ಅಣುಸ್ತಾವರದ ಬಳಿ 2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಅಮೆರಿಕ ಎಸೆದಿದ್ದ ಜೀವಂತ ಬಾಂಬ್ ವೊಂದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಫುಕುಶಿಮಾ ಅಣುಸ್ತಾವರದ ಆವರಣದಲ್ಲಿ ಅಣುಸ್ತಾವರದ ಸಿಬ್ಬಂದಿ ಪಾರ್ಕಿಂಗ್ ವ್ಯವಸ್ಥೆಗಾಗಿ ನೆಲವನ್ನು ಅಗೆಯುತ್ತಿದ್ದಾಗೆ ಬಾಂಬ್ ಮಾದರಿಯ ವಸ್ತು ಪತ್ತೆಯಾಗಿದ್ದು, ಇದು 1945ರಲ್ಲಿ ಅಮೆರಿಕ ಎಸೆದಿದ್ದ ಬಾಂಬ್ ಎಂದು ಶಂಕಿಸಲಾಗಿದೆ. ಸುಮಾರು 85 ಸೆಂಟಿ ಮೀಟರ್ (2.9 ಅಡಿ ಉದ್ಧ) ಉದ್ಧದ ಈ ಬಾಂಬ್ ಪತ್ತೆಯಾಗುತ್ತಿದ್ದಂತೆಯೇ ಹೆದರಿದ ಕಾರ್ಮಿಕರು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದು, ಬಾಂಬ್ ನಿಷ್ಕ್ರಿಯ ತಂಡದ ಸಮೇತರಾಗಿ ಆಗಮಿಸಿದ ಪೊಲೀಸರು ಜೀವಂತ ಬಾಂಬ್ ಆನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಟೋಕಿಯೋ ಎಲೆಕ್ಟ್ರಿಕ್ ಪವರ್ ಕಂಪನಿಯ ಕಾರ್ಮಿಕರು ಈ ಪ್ರದೇಶದಲ್ಲಿ ಪಾರ್ಕಿಂಗ್ ಪ್ರದೇಶ ನಿರ್ಮಾಣ ಮಾಡಲು ಕಾಮಗಾರಿ ಆರಂಭಿಸಿದ್ದರು. ಈ ವೇಳೆ ನೆಲ ಅಗೆಯುತ್ತಿದ್ದಾಗ ಈ ಬಾಂಬ್ ಪತ್ತೆಯಾಗಿದೆ. 1945ರಲ್ಲಿ ನಡೆದ 2ನೇ ಮಹಾಸಮರದಲ್ಲಿ ಜಪಾನ್ ನಾದ್ಯಂತ ಅಮೆರಿಕ ಬಾಂಬ್ ಗಳ ಸುರಿಮಳೆಗರೆದಿತ್ತು. ಆ ಬಳಿಕ ಅಂದರೆ 70 ವರ್ಷಗಳಿಂದಲೂ ಆಗಾಗ ಜಪಾನ್ ನಲ್ಲಿ ಅಮೆರಿಕ ಎಸೆದ ಬಾಂಬ್ ಗಳು ಹಾಗೂ ಶೆಲ್ ಗಳು ಪತ್ತೆಯಾಗುತ್ತಲಿರುತ್ತವೆ. ಪ್ರಸ್ತುತ ದೊರತೆ ಬಾಂಬ್ ಕೂಡ ಅದರಲ್ಲಿ ಒಂದಾಗಿದ್ದು, ಈ ಬಾರಿ ಅಣುಸ್ತಾವರದ ಬಳಿ ಬಾಂಬ್ ಪತ್ತೆಯಾಗಿದ್ದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಇನ್ನು ಬಾಂಬ್ ಸ್ಫೋಟಗೊಂಡಿದ್ದರೆ ಅಣುಸ್ತಾವರದ ಗತಿ ಏನು ಎಂಬ ಆತಂಕ ಕೂಡ ಉಂಟಾಗಿತ್ತಾದರೂ ಇದಕ್ಕೆ ತಜ್ಞರು ಸ್ಪಷ್ಟನೆ ನೀಡಿದ್ದಾರೆ. ಬಾಂಬ್ ಸ್ಫೋಟಗೊಂಡಿದ್ದರೂ ಸ್ತಾವರಕ್ಕೆ ಅಂತಹ ಗಂಭೀರ ಪರಿಣಾಮ ಉಂಟಾಗುತ್ತಿರಲಿಲ್ಲ. 2011ರಲ್ಲಿ ಉಂಟಾದ ಭೀಕರ ಸುನಾಮಿ ಬಳಿಕ ಫುಕಿಶಿಮಾ ಅಣುಸ್ತಾವರದ ಕೆಲ ಘಟಕಗಳು ಗಂಭೀರವಾಗಿ ಹಾನಿಗೀಡಾಗಿದ್ದವು. ಇದು 1986ರಲ್ಲಿ ನಡೆದ ಚೆರ್ನೋಬಿಲ್ ದುರಂತಕ್ಕಿಂತ ಭಾರಿ ಪ್ರಮಾಣದ ಹಾನಿಯಾಗಿತ್ತು. ಈ ಹಾನಿ ಬಳಿಕ ಇವುಗಳ ದುರಸ್ತಿಕಾರ್ಯ ಇನ್ನು ನಡೆಯುತ್ತಿದೆ. ಹೀಗಾಗಿ ಕೆಲ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಇಲ್ಲಿ ಯಾವುದೇ ಅಣು ಕಾರ್ಯ ನಡೆಯುತ್ತಿಲ್ಲ. ಹೀಗೆ ಸ್ಥಗಿತವಾದ ಘಟಕದ ಸಮೀಪದಲ್ಲೇ ಬಾಂಬ್ ಪತ್ತೆಯಾಗಿದೆ ಎಂದು ಸ್ತಾವರದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು 2011ರಲ್ಲಿ ಸಂಭವಿಸಿದ ಸುನಾಮಿ ಬಳಿಕ ಇಂದಿಗೂ ಫುಕಿಶಿಮಾ ಅಣುಸ್ತಾವರದ ಸುತ್ತಮುತ್ತಲ ಪ್ರದೇಶದಲ್ಲಿ ವಿಕಿರಣ ಪ್ರಭಾವವಿದ್ದು, ಇದೇ ಕಾರಣಕ್ಕೆ ಅಲ್ಲಿನ ಸರ್ಕಾರ ಅಣುಸ್ತಾವರದ ಸುತ್ತಮುತ್ತಲಿನ ಜನರನ್ನು ಸ್ಥಳಾಂತರ ಮಾಡಿತ್ತು. ಹೀಗಾಗಿ ಪ್ರಸ್ತುತ ಅಣುಸ್ತಾವರದ ಸುಮಾರು 5 ರಿಂದ 10 ಕಿ,ಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಜನರು ವಾಸ ಮಾಡುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.