ಲಂಡನ್: ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ರಾಮ್ ರಹೀಂ ಅವರು ದೋಷಿ ಎಂದು ತೀರ್ಪು ಪ್ರಕಟಗೊಂಡ ಬಳಿಕ ಹಿಂಸಾಚಾರದಿಂದಾಗಿ ಹರಿಯಾಣ ರಾಜ್ಯ ಹೊತ್ತಿ ಉರಿಯುತ್ತಿದ್ದು, ಈ ಹಿನ್ನಲೆಯಲ್ಲಿ ತನ್ನ ದೇಶದ ನಾಗರೀಕರಿಗೆ ಬ್ರಿಟನ್ ಸರ್ಕಾರ ಸುರಕ್ಷಾ ಸಲಹೆಯನ್ನು ನೀಡಿದೆ.
ಡೇರಾ ಸಚ್ಚಾ ಸೌಧದ ಮುಖ್ಯಸ್ಥ ರಾಮ್ ರಹೀಂ ಅವರ ವಿರುದ್ಧ ತೀರ್ಪು ಪ್ರಕಟಗೊಂಡಿರುವ ಹಿನ್ನಲೆಯಲ್ಲಿ ಹರಿಯಾಣದಲ್ಲಿ ಉಂಟಾಗಿರುವ ಹಿಂಸಾಚಾರದಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಹರಿಯಾಣದಲ್ಲಿ ಹಿಂಸಾಚಾರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು, ಜನಸಂದಣಿ ಹೆಚ್ಚಿರುವ ಪ್ರದೇಶಗಳಿಂದ ನಾಗರೀಕರು ದೂರವಿರಬೇಕು ಎಂದು ಬ್ರಿಟನ್ ಸರ್ಕಾರ ತನ್ನ ನಾಗರೀಕರಿಗೆ ಸಲಹೆಗಳನ್ನು ನೀಡಿದೆ.
ಹಿಂಸಾಚಾರ ಹಿನ್ನಲೆಯಲ್ಲಿ ಹರಿಯಾಣ, ಪಂಜಾಬ್ ಹಾಗೂ ಚಂಢೀಗಢದಲ್ಲಿ ಆಗಸ್ಟ್ 30 ರವರೆಗೂ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಹಿಂಸಾಚಾರ ಹಿನ್ನಲೆಯಲ್ಲಿ ನಾಗರೀಕರ ಭದ್ರತೆ ಹಾಗೂ ಸುರಕ್ಷತೆಗಾಗಿ ಬ್ರಿಟೀಷ್ ಹೈ ಕಮಿಷನ್ ಹಾಗೂ ಬ್ರಿಟೀಷ್ ಕೌನ್ಸಿಲ್ ಕಚೇರಿಗಳು ಆಗಸ್ಟ್.28ರವರೆಗೂ ಚಂಡೀಗಢ ಸರ್ಕಾರದೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿರುತ್ತದೆ.
ಸ್ಥಳೀಯ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಗಳು ನೀಡುವ ಸಲಹೆಗಳನ್ನು ಪಾಲನೆ ಮಾಡಬೇಕು. ಸ್ಥಳೀಯ ಮಾಧ್ಯಮಗಳು ಗಮನಿಸುತ್ತಿರಬೇಕು ಹಾಗೂ ಟ್ರಾವೆಲ್ ಕಂಪನಿಗಳೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿರಬೇಕು. ಹಿಂಸಾಚಾರ ಸಂದರ್ಭಗಳಲ್ಲಿ ಸ್ಥಳೀಯ ರಸ್ತೆಗಳು ಹಾಗೂ ರೈಲು ಮಾರ್ಗಗಳು ಅಸ್ತವ್ಯಸ್ತಗೊಳ್ಳುವುದರಿಂದ ನಾಗರೀಕರು ಬಹಳ ಎಚ್ಚರದಿಂದಿರಬೇಕು ಎಂದು ಹೇಳಿಕೊಂಡಿದೆ.
2002ರಲ್ಲಿ ಗುರ್ತಿಮ್ ರಾಮ್ ರಹೀಮ್ ಅವರ ಆಶ್ರಮದಲ್ಲಿ ಇಬ್ಬರು ಮಹಿಳಾ ಭಕ್ತರ ಮೇಲೆ ಅತ್ಯಾಚಾರ ಮಾಡಿದ್ದ ಪ್ರಕರಣ ಸಂಬಂಧ ನಿನ್ನೆಯಷ್ಟೇ ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ಪ್ರಕಟಿಸಿತ್ತು. ಪ್ರಕರಣದಲ್ಲಿ ದೇವಮಾನವ ರಾಮ್ ರಹೀಮ್ ದೋಷಿ ಎಂದು ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು.
ನ್ಯಾಯಾಲಯದ ತೀರ್ಪು ಪ್ರಕಟಿಸುತ್ತಿದ್ದಂತೆಯೇ ಹರಿಯಾಣ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಹಿಂಸಾಚಾರದಲ್ಲಿ ಈ ವರೆಗೂ 32ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 250 ಮಂದಿ ಗಾಯಗೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos