ಚೀನಾ ವಿದೇಶಾಂಗ ಸಚಿವ ವಾಂಗ್ ಯಿ
ಬೀಜಿಂಗ್: 73 ದಿನಗಳ ಕಾಲ ಉಭಯ ರಾಷ್ಟ್ರಗಳ ನಡುವೆ ಸಮರದ ವಾತಾವರಣವನ್ನು ನಿರ್ಮಾಣ ಮಾಡಿದ್ದ ಡೋಕ್ಲಾಮ್ ವಿವಾದ ಭಾರತಕ್ಕೆ ಒಂದು ಪಾಠವಾಗಿದೆ ಚೀನಾ ಬುಧವಾರ ಹೇಳಿಕೊಂಡಿದೆ.
ಉಭಯ ರಾಷ್ಟ್ರಗಳ ನಡುವೆ ವಾಕ್ಸಮರ ಹಾಗೂ ಸೇನಾ ಮುಖಾಮುಖಿಗೆ ಕಾರಣವಾಗಿದ್ದ ಡೋಕ್ಲಾಮ್ ವಿವಾದ ಸುಖಾಂತ್ಯ ಕಂಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು, ಭಾರತೀಯ ಸೇನೆ ಅತಿಕ್ರಮಣದಿಂದ ಗಡಿಯಲ್ಲಿ ಉಂಟಾಗಿದ್ದ ಪ್ರಕ್ಷುಬ್ದ ವಾತಾವರಣ ಇದೀಗ ಸ್ಥಿರಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಉಭಯ ರಾಷ್ಟ್ರಗಳ ಸೇನೆ ಹಿಂದಕ್ಕೆ ಸರಿದಿದ್ದು, ವಿವಾದ ಅಂತ್ಯಕಂಡಿದೆ. ಡೋಕ್ಲಾಮ್ ವಿವಾದದಿಂದ ಭಾರತ ಪಾಠ ಕಲಿತುಕೊಂಡಿದ್ದು, ಮತ್ತೆಂದೂ ಈ ರೀತಿಯ ವರ್ತನೆಗಳನ್ನು ತೋರುವುದಿಲ್ಲ ಎಂದು ನಾವು ನಂಬಿದ್ದೇವೆಂದು ತಿಳಿಸಿದ್ದಾರೆ.
ಚೀನಾ ವಿದೇಶಾಂಗ ಸಚಿವ ನೀಡಿರುವ ಹೇಳಿಕೆ ಕುರಿತಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಿಲ್ಲ.
ಸುಧೀರ್ಘ 2 ತಿಂಗಳಿಗೂ ಅಧಿಕ ಕಾಲ ನಡೆದ ಭಾರತ-ಚೀನೀ ಸೈನಿಕರ ಸಂಘರ್ಷಕ್ಕೆ ಉಭಯ ದೇಶಗಳ ಸರ್ಕಾರಗಳು ದಿನಗಳ ಹಿಂದಷ್ಟೇ ತಾರ್ಕಿಕ ಅಂತ್ಯ ನೀಡಿತ್ತು.
ಈ ಹಿಂದೆ ಲಡಾಖ್ ನಲ್ಲಿ ಭಾರತೀಯ ಸೈನಿಕರ ಮೇಲೆ ಚೀನೀ ಸೈನಿಕರು ಹಲ್ಲೆ ಮಾಡಿತ್ತಲ್ಲದೇ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಹಲವು ಸೈನಿಕರು ಗಾಯಗೊಂಡಿದ್ದರು. ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಈ ವಿಡಿಯೋ ಸಂಬಂಧ ವಿಶ್ವ ಸಮುದಾಯ ಸಮಸ್ಯೆ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದವು. ಬಳಿಕ ಭಾರತ ಸರ್ಕಾರ ರಾಜತಾಂತ್ರಿಕ ಮಾರ್ಗ ಮೂಲಕವೇ ವಿವಾದವನ್ನು ಬಗೆಹರಿಸಲು ಯತ್ನ ನಡೆಸಿತ್ತು. ಈ ಯತ್ನ ಯಶಸ್ಸು ಕಂಡಿತ್ತು. ಉಭಯ ರಾಷ್ಟ್ರಗಳು ಏಕಕಾಲದಲ್ಲಿ ವಿವಾದಿತ ಗಡಿ ಪ್ರದೇಶದಿಂದ ತಮ್ಮ ತಮ್ಮ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಂಡಿತ್ತು.
ಒಂದೆಡೆ ಕೇಂದ್ರ ಸರ್ಕಾರದ ರಾಜತಾಂತ್ರಿಕ ಸಂಧಾನದ ಫಲವಾಗಿ ಚೀನಾ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿದೆ ಎಂದು ವರದಿ ಬಿತ್ತರವಾಗುತ್ತಿದ್ದರೆ ಮತ್ತೊಂದೆಡೆ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ತನ್ನ ವೈಬ್ ಸೈಟಿನಲ್ಲಿ ಭಾರತ ಸರ್ಕಾರ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದೆ ಎಂದು ವರದಿ ಮಾಡಿತ್ತು.