ಚೀನಾ ನಿಯಂತ್ರಣದಲ್ಲಿ ಸಿಪಿಇಸಿ: ಯುವಾನ್ ಕರೆನ್ಸಿಯಲ್ಲಿ ವ್ಯಾಪಾರ ನಡೆಸಲು ಪಾಕಿಸ್ತಾನಕ್ಕೆ ಒತ್ತಡ
ಇಸ್ಲಾಮಾಬಾದ್: ಚೀನಾ ತನ್ನ ಮೇಲೆ ಅವಲಂಬನೆಯಾಗಿರುವ ದೇಶಗಳ ಮಾತಿಗೆ ಮನ್ನಣೆ ನೀಡುವುದು ತೀರಾ ವಿರಳ. ಎಷ್ಟೇ ಕಠಿಣವಾದರೂ ತನ್ನ ತಾಳಕ್ಕೆ ತಕ್ಕಂತೆ ಕುಣಿಸುವುದರಲ್ಲಿ ಚೀನಾ ನಿಸ್ಸೀಮ ರಾಷ್ಟ್ರ. ಈ ಅಂಶವನ್ನು ಪಾಕಿಸ್ತಾನದ ನಿರ್ಧಾರ ಮತ್ತೊಮ್ಮೆ ಸಾಬೀತುಪಡಿಸಿದೆ.
ಗ್ವಾದರ್ ಪೋರ್ಟ್ ನಲ್ಲಿ ಯುವಾನ್ ಕರೆನ್ಸಿಯಲ್ಲಿ ವ್ಯಾಪಾರ ನಡೆಸಲು ಈ ಹಿಂದೆ ಪಾಕಿಸ್ತಾನ ತಿರಸ್ಕರಿಸಿತ್ತು. ಆದರೆ ಈಗ ಯುವಾನ್ ಕರೆನ್ಸಿಯಲ್ಲಿಯೇ ವ್ಯಾಪಾರ ವಹಿವಾಟು ನಡೆಸುವುದನ್ನು ಪರಿಗಣಿಸುವುದಾಗಿ ಪಾಕಿಸ್ತಾನ ಹೇಳಿದೆ ಸೂಚಿಸಿದೆ. ಅಷ್ಟೇ ಅಲ್ಲದೇ, ಪಾಕಿಸ್ತಾನ ಚೀನಾದೊಂದಿಗೆ ನಡೆಸುವ ಎಲ್ಲಾ ದ್ವಿಪಕ್ಷೀಯ ವ್ಯಾಪಾರವನ್ನು ಯುವಾನ್ ಕರೆನ್ಸಿಯಲ್ಲಿಯೇ ನಡೆಸಲು ಒಪ್ಪಿಗೆ ಸೂಚಿಸಿದೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಪ್ರಕಟಿಸಿದೆ.
ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್(ಸಿಪಿಇಸಿ) ಗೆ ಸಂಬಂಧಿಸಿದ ಲಾಂಗ್ ಟರ್ಮ್ ಪ್ಲಾನ್ (ಎಲ್ ಟಿಪಿ) ಕಾರ್ಯಕ್ರಮದಲ್ಲಿ ಪಾಕಿಸ್ತಾನ ಈ ನಿರ್ಧಾರವನ್ನು ಪ್ರಕಟಿಸಿದೆ. ವ್ಯಾಪರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಚೀನಾದ ಕರೆನ್ಸಿ ಯುವಾನ್ ನ್ನು ಅಮೆರಿಕಾ ಡಾಲರ್ ಗೆ ಸರಿ ಸಮನಾಗಿ ಪರಿಗಣಿಸಲು ಒಪ್ಪಿಗೆ ಸೂಚಿಸಿದ್ದು, ಯುಎಸ್ ಡಿಗೆ ಸಿಗುವ ಎಲ್ಲಾ ಸವಲತ್ತುಗಳನ್ನೂ ಯುವಾನ್ ಗೂ ನೀಡುವುದಾಗಿ ಹೇಳಿದೆ. ಈ ಮೂಲಕ ಪಾಕಿಸ್ತಾನ ನಡೆಸುವ ಬೃಹತ್ ವ್ಯಾಪಾರದಲ್ಲಿ ಅಮೆರಿಕಾದ ಡಾಲರ್ ನ ನಂತರ ಚೀನಾದ ಯುವಾನ್ ಕರೆನ್ಸಿ ಸ್ಥಾನ ಪಡೆಯಲಿದೆ.