ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್
ಇಸ್ಲಾಮಾಬಾದ್: ಭಾರತದ ಪರ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಯೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪತ್ನಿ ಹಾಗೂ ತಾಯಿ ಡಿ.25 ರಂದು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆಂದು ಪಾಕಿಸ್ತಾನ ವಿದೇಶಾಂಗ ಕಚೇರಿ ಭಾನುವಾರ ಹೇಳಿದೆ.
ಈ ಕುರಿತಂತೆ ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ಮೊಹಮ್ಮದ್ ಫೈಸಲ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ವಾಣಿಜ್ಯ ವಿಮಾನದಲ್ಲಿ ಡಿ.25 ರಂದು ಜಾಧವ್ ಅವರ ಪತ್ನಿ ಹಾಗೂ ತಾಯಿ ಪಾಕಿಸ್ತಾನಕ್ಕೆ ಆಗಮಿಸಲಿದ್ದು, ಅವರೊಂದಿಗೆ ಭಾರತೀಯ ರಾಯಭಾರಿ ಅಧಿಕಾರಿಗಳು ಕೂಡ ಪಾಕಿಸ್ತಾನಕ್ಕೆ ಆಗಮಿಸುತ್ತಾರೆಂದು ಹೇಳಿದ್ದಾರೆ.
ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು ಅವರ ಪತ್ನಿ ಹಾಗೂ ತಾಯಿಗೆ ಪಾಕಿಸ್ತಾನ ಸರ್ಕಾರ ಡಿ.20 ರಂದು ವೀಸಾ ನೀಡಿತ್ತು.
47 ವರ್ಷದ ಕುಲಭೂಷಣ್ ಜಾದವ್ ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸಿದ್ದಾರೆ ಎಂಬ ಆರೋಪದ ಮೇರೆಗೆ ಕಳೆದ ಏಪ್ರಿಲ್ ನಲ್ಲಿ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ ಗಲ್ಲು ಶಿಕ್ಷೆ ಕಾಯಂಗೊಳಿಸಿತ್ತು. ಇದನ್ನು ವಿರೋಧಿಸಿ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು.
ನವೆಂಬರ್ 10ರಂದು ಕುಲಭೂಷಣ್ ಜಾಧವ್ ಭೇಟಿಗೆ ಅವರ ತಾಯಿ ಮತ್ತು ಪತ್ನಿಗೆ ಅವಕಾಶ ಮಾಡಿಕೊಡುವುದಾಗಿ ಪಾಕಿಸ್ತಾನ ಸರ್ಕಾರ ಹೇಳಿತ್ತು. ಈ ಹಿಂದೆ ಕುಲಭೂಷಣ್ ಜಾಧವ್ ಕುರಿತಂತೆ ಭಾರತ ಸರ್ಕಾರ 20 ಬಾರಿ ಮನವಿ ಮಾಡಿದ್ದರು ಈ ಮನವಿಯನ್ನು ಪಾಕಿಸ್ತಾನ ಸರ್ಕಾರ ತಿರಸ್ಕರಿಸಿತ್ತು.