ಭಾರತೀಯ ಪ್ರಜೆ ಕುಲ್ ಭೂಷಣ್ ಜಾಧವ್
ಇಸ್ಲಾಮಾಬಾದ್: ಬೇಹುಗಾರಿಕೆ ಆರೋಪ ಸಂಬಂಧ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲ್ ಭೂಷಣ್ ಜಾಧವ್ ಅವರನ್ನು ಭೇಟಿ ಮಾಡುವ ಸಲುವಾಗಿ ಕುಟುಂಬ ಸದಸ್ಯರು ಇಸ್ಲಾಮಾಬಾದ್ ತಲುಪಿದ್ದು, ಈ ನಡುವೆ ಜಾಧವ್ ರಾಯಭಾರ ಕಚೇರಿ ನೆರವು ಕುರಿತಂತೆ ಪಾಕಿಸ್ತಾನದಲ್ಲಿರುವ ಅಧಿಕಾರಿಗಳೇ ಗೊಂದಲ ರೀತಿಯಲ್ಲಿ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ.
ಪಾಕಿಸ್ತಾನದ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಪಾಕಿಸ್ತಾನ ವಿದೇಶಾಂಗ ಸಚಿವರು, ಜಾಧವ್ ಪ್ರಕರಣ ಅಂತರಾಷ್ಟ್ರೀಯ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಪಾಕಿಸ್ತಾನದ ಬಗ್ಗೆ ಅಪಪ್ರಚಾರ ನಡೆಸಲು ಭಾರತಕ್ಕೆ ಅವಕಾಶ ದೊರೆಯಬಾರದು ಎಂಬ ಏಕೈಕ ಕಾರಣಕ್ಕೆ ಜಾಧವ್ ಅವರಿಗೆ ಕುಟುಂಬ ಸದಸ್ಯರ ಭೇಟಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದೇ ವೇಳೆ ದೂತವಾಸದ ಒಬ್ಬ ಅಧಿಕಾರಿಯೂ ಕುಟುಂಬ ಸದಸ್ಯರ ಜತೆಗಿರುತ್ತಾರೆಂದು ಹೇಳಿದ್ದಾರೆ.
ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ನಮ್ಮ ವಾದಕ್ಕೆ ಹಿನ್ನಡೆಯಾಗಬಾರದು ಎಂಬ ಕಾರಣಕ್ಕೆ ಮಾನವೀಯ ನೆಲೆಯಲ್ಲಿ ಜಾಧವ್ ಕುಟುಂಬ ಸದಸ್ಯರ ಭೇಟಿಗೆ ಅವಕಾಶ ನೀಡಿದ್ದೇವೆ. ಹಾಗಿದ್ದರೂ ಒಂದು ವೇಳೆ ನಾವು ಈ ಸ್ಥಿತಿಯಲ್ಲಿದ್ದರೆ ಭಾರತ ಅಷ್ಟೊಂದು ದಯೆ ತೋರಿಸುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಜಾಧವ್ ರಾಯಭಾರ ನೆರವಿಗೆ ಪಾಕಿಸ್ತಾನ ಅವಕಾಶ ನೀಡಿದೆ ಎಂಬ ಸುದ್ದಿಗಳು ಕೇಳಿಬರುತ್ತಿದ್ದಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಕಚೇರಿಯು, ಜಾಧವ್ ಅವರಿಗೆ ಪಾಕಿಸ್ತಾನ ರಾಯಭಾರ ನೆರವು ನೀಡುತ್ತಿಲ್ಲ ಎಂದು ಹೇಳಿದೆ.
ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ಡಾ.ಮುಹಮ್ಮದ್ ಫೈಸಲ್ ಅವರು, ಜಾಧವ್ ಹಾಗೂ ಅವರ ಕುಟುಂಬ ಸದಸ್ಯರು ಭೇಟಿಯಾಗುತ್ತಿದ್ದ ಮಾತ್ರಕ್ಕೆ ಜಾಧವ್'ಗೆ ಪಾಕಿಸ್ತಾನ ರಾಯಭಾರ ನೆರವು ನೀಡುತ್ತಿದೆ ಎಂಬ ಅರ್ಥವಲ್ಲ. ಪಾಕಿಸ್ತಾನ ಸರ್ಕಾರ ಜಾಧವ್'ಗೆ ರಾಯಭಾರ ನೆರವು ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.
47 ವರ್ಷದ ಕುಲಭೂಷಣ್ ಜಾದವ್ ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸಿದ್ದಾರೆ ಎಂಬ ಆರೋಪದ ಮೇರೆಗೆ ಕಳೆದ ಏಪ್ರಿಲ್ ನಲ್ಲಿ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ ಗಲ್ಲು ಶಿಕ್ಷೆ ಕಾಯಂಗೊಳಿಸಿತ್ತು. ಇದನ್ನು ವಿರೋಧಿಸಿ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು.