ಪತ್ನಿ, ತಾಯಿ ಜೊತೆ ಮಾತನಾಡುತ್ತಿರುವ ಕುಲಭೂಷಣ್ ಜಾಧವ್
ಇಸ್ಲಾಮಾಬಾದ್: ಭಾರತದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಕಳೆದ ವರ್ಷ ಮಾರ್ಚ್ 3ರಂದು ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಇದೇ ಮೊದಲ ಬಾರಿಗೆ ಅವರ ತಾಯಿ ಮತ್ತು ಪತ್ನಿ ಭೇಟಿ ಮಾಡಿದ್ದಾರೆ. ಆದರೆ ಈ ಭೇಟಿಯೇ ಕೊನೆಯಾಗುವುದಿಲ್ಲ. ಮುಂದೆ ಜಾಧವ್ ಗೆ ರಾಯಭಾರ ಕಚೇರಿಯ ನೆರವು ಒದಗಿಸುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳುವುದಾಗಿ ಸೋಮವಾರ ಪಾಕಿಸ್ತಾನ ಹೇಳಿದೆ.
ಕುಲಭೂಷಣ್ ಜಾಧವ್ ಭಾರತೀಯ ಭಯೋತ್ಪಾದನೆಯ ಮುಖ ಎಂದಿರುವ ಪಾಕಿಸ್ತಾನ, ಗಲ್ಲು ಶಿಕ್ಷೆಗೆ ಗುರಿಯಾಗಿರುವ ಆತನಿಗೆ ರಾಯಭಾರ ಕಚೇರಿ ನೆರವು ನೀಡುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದೆ.
ಜಾಧವ್ ಪತ್ನಿ, ತಾಯಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಾಲ್ ಅವರು, ಕುಲಭೂಷಣ್ ಜಾಧವ್ ತಮ್ಮ ಕುಟುಂಬವನ್ನು ಭೇಟಿ ಮಾಡಿರುವುದೇ ಕೊನೆಯಾಗುವುದಿಲ್ಲ. ಹಂತ ಹಂತವಾಗಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.
ಕುಲಭೂಷಣ್ ಜಾಧವ್ಅವರು ಇಂದು ಗಾಜಿನ ತಡೆಗೋಡೆ ಮಧ್ಯೆ ತಮ್ಮ ತಾಯಿ ಅವಂತಿ ಮತ್ತು ಪತ್ನಿ ಚೇತಂಕುಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇಸ್ಲಾಮಾಬಾದ್ನಲ್ಲಿರುವ ಪಾಕ್ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ಭೇಟಿಗೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 1.35ಕ್ಕೆ ಭೇಟಿಗೆ ಅವಕಾಶ ಮಾಡಿಕೊಡಲಾಯಿತು. ಸುಮಾರು 40 ನಿಮಿಷಗಳ ಕಾಲ ಜಾಧವ್, ತಾಯಿ ಮತ್ತು ಪತ್ನಿ ಜೊತೆ ಮಾತುಕತೆ ನಡೆಸಿದರು.