ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವೆ ಕಾಶ್ಮೀರ ವಿವಾದದ ಕೇಂದ್ರ ಬಿಂದುವಾಗಿದ್ದು, ಅದನ್ನು ಬಗೆಹರಿಸದಿದ್ದರೆ ಕಾಶ್ಮೀರ ಜನತೆಯ ಶಾಂತಿ, ಸಮೃದ್ಧಿಯ ಕನಸು ಹಾಗೆಯೇ ಉಳಿದುಕೊಳ್ಳಲಿದೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ತಿಳಿಸಿದ್ದಾರೆ.
ಕಾಶ್ಮೀರ ಐಕ್ಯಮತ ದಿನದ ಅಂಗವಾಗಿ ಮಾತನಾಡಿದ ಅವರು, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿಷಯ ಅತ್ಯಂತ ಹಳೆಯ ವಿವಾದ ಮತ್ತು ಇಬ್ಭಾಗದ ಅಪೂರ್ಣ ಅಜೆಂಡಾ ಆಗಿದೆ ಎಂದು ಹೇಳಿದರು.
ಕಳೆದ ಏಳು ದಶಕಗಳಿಂದ ಭಾರತ ಸರ್ಕಾರ ಕಾಶ್ಮೀರಿ ಜನತೆಯ ಸ್ವ ನಿರ್ಧಾರದ ಹಕ್ಕನ್ನು ನಿರಾಕರಿಸುತ್ತಲೇ ಬಂದಿದೆ. ಭಾರತ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಇತ್ತೀಚೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯದ ಮೂಲಕ ನೀಡಿದ್ದ ಭರವಸೆಗಳನ್ನು ಕೂಡ ಈಡೇರಿಸಿಲ್ಲ ಎಂದು ಆಪಾದಿಸಿದರು.
ಕಾಶ್ಮೀರಿ ಜನರ ಮೂಲಭೂತ ಹಕ್ಕುಗಳ ಬಗ್ಗೆ ಹೋರಾಟ ನಡೆಸಲು ಅವರಿಗೆ ನೈತಿಕ, ರಾಜತಾಂತ್ರಿಕ ಮತ್ತು ರಾಜಕೀಯ ಬೆಂಬಲ ನೀಡಲು ಪಾಕಿಸ್ತಾನ ಇಂದು ಕಾಶ್ಮೀಯರೊಂದಿಗೆ ಕಾಶ್ಮೀರ ಏಕತೆ ದಿನ ಆಚರಿಸಲು ಕೈಜೋಡಿಸುತ್ತಿದೆ ಎಂದು ಶರೀಫ್ ಹೇಳಿದರು.
ವ್ಯವಸ್ಥಿತ ಭಯೋತ್ಪಾದನೆ ಮೂಲಕ ಕಾಶ್ಮೀರದ ಮುಗ್ಧ ಜನರನ್ನು ಕೊಲ್ಲುತ್ತಿರುವ ಭಾರತೀಯ ಸೇನಾಪಡೆಗಳ ಕೃತ್ಯವನ್ನು ಪಾಕಿಸ್ತಾನ ಬಲವಾಗಿ ಖಂಡಿಸುತ್ತದೆ. ಕಾಶ್ಮೀರಿ ಜನರು ನಿಜವಾದ ಸ್ವಾತಂತ್ರ್ಯ, ಶಾಂತಿ, ಸೌಹಾರ್ದತೆಗೆ ಹಾತೊರೆಯುವುದನ್ನು ಅರ್ಥಮಾಡಿಕೊಂಡು ಅವರಿಗೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ವಿಫಲವಾಗಿದೆ ಎಂದರು.
ನಿರಂತರ ಮಾನವ ಹಕ್ಕು ಉಲ್ಲಂಘನೆ ಮತ್ತು ಭಾರತೀಯ ಪಡೆಗಳು ನಡೆಸುತ್ತಿರುವ ಭಯೋತ್ಪಾದಕ ಕೃತ್ಯಗಳನ್ನು ನಿಲ್ಲಿಸಲು ಅದರ ವಿರುದ್ಧ ಧ್ವನಿಯೆತ್ತಬೇಕು ಎಂದು ಇದೇ ಸಂದರ್ಭದಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದೆ.
ಕಾಶ್ಮೀರದಲ್ಲಿ ರಕ್ತಪಾತವನ್ನು ನಿಲ್ಲಿಸಿ ವಿಶ್ವಸಂಸ್ಥೆ ನಿಯೋಗದ ಆಶ್ರಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಜನಾಭಿಪ್ರಾಯವನ್ನು ಸಂಗ್ರಹಿಸಬೇಕು ಎಂದು ನಾವು ಒತ್ತಾಯಿಸುವುದಾಗಿ ನವಾಜ್ ಷರೀಫ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos