ವಿದೇಶ

ವಲಸೆ ನೀತಿಗೆ ಹೊಸ ಆದೇಶ ಹೊರಡಿಸಲು ಟ್ರಂಪ್ ಚಿಂತನೆ!

Srinivas Rao BV
ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆ ನೀತಿಗೆ ಸಂಬಂಧಿಸಿದಂತೆ ಹೊರಡಿಸಿದ್ದ ಆದೇಶಕ್ಕೆ ಅಮೆರಿಕಾದ ಫೆಡರಲ್ ಕೋರ್ಟ್ ತಡೆ ನೀಡಿದ್ದ ಹಿನ್ನೆಲೆಯಲ್ಲಿ ವಲಸೆ ನೀತಿಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಲು ಡೊನಾಲ್ಡ್ ಟ್ರಂಪ್ ಚಿಂತನೆ ನಡೆಸಿದ್ದಾರೆ. 
ಈ ಬಗ್ಗೆ ಅಲ್ಲಿನ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದು, " ನಾವು ಈ ಯುದ್ಧವನ್ನು ಗೆಲ್ಲುತ್ತೇವೆ, ದುರದೃಷ್ಟವೆಂದರೆ ಶಾಸನಬದ್ಧವಾಗಿ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ. ವಲಸೆ ನೀತಿಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸುವುದೂ ಸಹ ನಮ್ಮ ಮುಂದಿರುವ ಆಯ್ಕೆಗಳಲ್ಲಿ ಒಂದಾಗಿದೆ" ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಟ್ರಂಪ್, ವಲಸೆ ನೀತಿಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸುವುದು ಅತ್ಯುತ್ತಮ ಆಯ್ಕೆ ಎನಿಸುತ್ತಿದೆ ಎಂದಿದ್ದಾರೆ. ಜಪಾನ್ ಪ್ರಧಾನಿಯೊಂದಿಗಿನ ಮಾತುಕತೆಯಲ್ಲಿಯೂ ಟ್ರಂಪ್ ಈ ಬಗ್ಗೆ ಉಲ್ಲೇಖಿಸಿದ್ದು, ನಮ್ಮ ದೇಶದ ಭದ್ರತೆಗಾಗಿ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದ್ದೇವೆ, ಮುಂದಿನ ವಾರದಲ್ಲಿ ಇದನ್ನು ನೀವು ಗಮನಿಸುತ್ತೀರಿ ಎಂದು ಹೇಳಿದ್ದಾರೆ. 
ಜ.27 ರಂದು ಹೊಸ ವಲಸೆ ನೀತಿಯನ್ನು ಪ್ರಕಟಿಸಿದ್ದ ಡೊನಾಲ್ಡ್ ಟ್ರಂಪ್, ಇರಾನ್, ಸಿರಿಯಾ ಸೇರಿದಂತೆ ಒಟ್ಟು 7 ಮುಸ್ಲಿಂ ರಾಷ್ಟ್ರಗಳ ಪ್ರಜೆಗಳು ಅಮೆರಿಕಾ ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದರು. ಟ್ರಂಪ್ ಅವರ ಈ ಆದೇಶವನ್ನು ಫೆಡರಲ್ ಕೋರ್ಟ್ ತಡೆ ಹಿಡಿದಿತ್ತು. 
SCROLL FOR NEXT