ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಏಳು ಮುಸ್ಲಿಂ ರಾಷ್ಟ್ರಗಳಿಂದ ನಾಗರಿಕರು ಅಮೆರಿಕಾ ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ತಡೆಯಲು ಮುಂದಿನ ವಾರ ಹೊಚ್ಚ ಹೊಸ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಲು ಪರಿಗಣಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನಾವು ಯುದ್ಧದಲ್ಲಿ ಗೆಲ್ಲುತ್ತೇವೆ. ಇದು ಶಾಸನಬದ್ಧ ಸಮಯ ತೆಗೆದುಕೊಳ್ಳುತ್ತದೆ, ಹಾಗಾಗಿ ತಡವಾಗಬಹುದೇ ಹೊರತು ನಾವು ಯುದ್ಧದಲ್ಲಿ ಸೋಲುವುದಿಲ್ಲ., ನಮ್ಮಲ್ಲಿ ಅನೇಕ ಬೇರೆ ಆಯ್ಕೆಗಳಿವೆ, ಹೊಚ್ಚ ಹೊಸ ಆದೇಶವನ್ನು ಕೂಡ ಹೊರಡಿಸಬಹುದು ಎಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸುದ್ದಿಗಾರರಿಗೆ ಹೇಳಿದರು.
ಹೊಸ ಕಾರ್ಯಕಾರಿ ಆದೇಶವನ್ನು ಹೊರಡಿಸುವ ಆಲೋಚನೆಯಿದೆಯೇ ಎಂದು ಕೇಳಿದ್ದಕ್ಕೆ, ಹೌದು ಅದೇ ರೀತಿ ಇರಬಹುದು. ಅಮೆರಿಕಾದ ಜನರ ಭದ್ರತೆ ಕಾಪಾಡಲು ಕ್ಷಿಪ್ರ ಕ್ರಮ ತೆಗೆದುಕೊಳ್ಳಬೇಕು.ಹಾಗಾಗಿ ಆದಷ್ಟು ಶೀಘ್ರವೇ ತೀರ್ಮಾನ ಮಾಡಬೇಕಾಗಿದೆ ಎಂದರು.
ನಿರ್ಧಾರದ ಪ್ರಕಾರ ಮುಂದಿನ ವಾರ ಸೋಮವಾರ ಮತ್ತು ಮಂಗಳವಾರದೊಳಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ವಲಸೆಗೆ ಸಂಬಂಧಪಟ್ಟಂತೆ ಹೊಸ ಕಾರ್ಯಕಾರಿ ಆದೇಶದಲ್ಲಿ ಭದ್ರತಾ ಕ್ರಮಗಳ ಕುರಿತು ಕೂಡ ನಿರ್ಧಾರ ಮಾಡಲಾಗುತ್ತದೆ.
ಡೊನಾಲ್ಡ್ ಟ್ರಂಪ್ ಅವರು ಕಳೆದ ತಿಂಗಳು ಸಿರಿಯಾ, ಇರಾಕ್, ಇರಾನ್, ಲಿಬಿಯಾ, ಸೊಮಾಲಿಯಾ, ಸೂಡನ್, ಯೆಮನ್ ದೇಶಗಳ ನಾಗರಿಕರು ಅಮೆರಿಕಾದೊಳಗೆ 90ರಿಂದ 120 ದಿನಗಳವರೆಗೆ ಪ್ರವೇಶಿಸದಂತೆ ಕಾರ್ಯಕಾರಿ ಆದೇಶವನ್ನು ಹೊರಡಿಸಿದ್ದರು. ಅದು ಅವರು ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ್ದ ಭರವಸೆಗಳಲ್ಲಿ ಒಂದಾಗಿತ್ತು. ಆದರೆ ಪ್ರಯಾಣ ನಿಷೇಧದ ಆದೇಶವನ್ನು 9ನೇ ಯುಎಸ್ ಸರ್ಕ್ಯೂಟ್ ಕೋರ್ಟ್ ಆಫ್ ಅಪೀಲ್ಸ್ ತಳ್ಳಿಹಾಕಿತ್ತು.
ದೇಶಕ್ಕೆ ಸಾಕಷ್ಟು ಬೆದರಿಕೆಗಳಿವೆ. ನಮ್ಮ ದೇಶದ ನಾಗರಿಕರ ರಕ್ಷಣೆಗೆ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಅನುಸರಿಸುತ್ತೇವೆ. ಮುಂದಿನ ವಾರ ಆ ಬಗ್ಗೆ ಗೊತ್ತಾಗಬಹುದು ಎಂದು ನಂತರ ಶ್ವೇತಭವನದಲ್ಲಿ ಕೂಡ ಡೊನಾಲ್ಡ್ ಟ್ರಂಪ್ ತಿಳಿಸಿದರು.
ಜಪಾನ್ ಪ್ರಧಾನಿ ಶಿಂಸೊ ಅಬೆ ಜೊತೆ ನಿನ್ನೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕೋರ್ಟ್ ಪ್ರಕ್ರಿಯೆ ಪ್ರಕಾರವಾಗಿಯೇ ಹೋಗುತ್ತೇವೆ. ಆದರೂ ಅಂತಿಮವಾಗಿ ಗೆಲುವು ನಮ್ಮದೇ ಎಂದು ಹೇಳಿದ್ದಾರೆ.