ವಿದೇಶ

ಪಾಕಿಸ್ತಾನದಲ್ಲಿ ಪ್ರೇಮಿಗಳ ದಿನಾಚರಣೆಯನ್ನು ನಿಷೇಧಿಸಿದ ಇಸ್ಲಾಮಾಬಾದ್ ಹೈಕೋರ್ಟ್

Sumana Upadhyaya
ಇಸ್ಲಾಮಾಬಾದ್: ಪಾಕಿಸ್ತಾನದಾದ್ಯಂತ ಪ್ರೇಮಿಗಳ ದಿನಾಚರಣೆಗೆ ಇಸ್ಲಾಮಾಬಾದ್ ಹೈಕೋರ್ಟ್ ನಿಷೇಧ ಹೇರಿದೆ. ಪ್ರೇಮಿಗಳ ದಿನ ಮುಸಲ್ಮಾನರ ಸಾಂಪ್ರದಾಯಿಕ ಪದ್ಧತಿಯಲ್ಲ ಎಂದು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ನಿಷೇಧ ಹೇರಿದೆ.
ಕೋರ್ಟ್ ಆದೇಶದ ಪ್ರಕಾರ, ಪ್ರೇಮಿಗಳ ದಿನದ ಆಚರಣೆಯನ್ನು ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ನಿಷೇಧಿಸಲಾಗಿದೆ. ಪ್ರೇಮಿಗಳ ದಿನಕ್ಕೆ ಪ್ರಚಾರ ನೀಡಿ ಯಾವುದೇ ಸುದ್ದಿಗಳನ್ನು ನೀಡದಂತೆ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಅದೇಶ ನೀಡಲಾಗಿದೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಈ ಬಗ್ಗೆ ಇನ್ನು 10 ದಿನಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಹೈಕೋರ್ಟ್ ಮಾಹಿತಿ ಸಚಿವಾಲಯ, ಫೆಡರಲ್ ಸರ್ಕಾರ, ಪಾಕಿಸ್ತಾನ ಎಲೆಕ್ಟ್ರಾನಿಕ್ ಮಾಧ್ಯಮ ಪ್ರಾಧಿಕಾರದ ಅಧ್ಯಕ್ಷ ಮತ್ತು ಮುಖ್ಯ ಆಯುಕ್ತರಿಗೆ ನೊಟೀಸ್ ನೀಡಿದೆ.
 ದೇಶದ ಸಂಸ್ಕೃತಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲದಿರುವ ಪ್ರೇಮಿಗಳ ದಿನವನ್ನು ಆಚರಿಸದಂತೆ ಕಳೆದ ವರ್ಷ ರಾಷ್ಟ್ರಪತಿ ಮಮ್ನೂನ್ ಹುಸೇನ್ ದೇಶದ ಜನತೆಗೆ ಕರೆ ನೀಡಿದ್ದರು. ದೇಶದ ಧಾರ್ಮಿಕ ಮತ್ತು ರಾಷ್ಟ್ರೀಯ ಗುರುತನ್ನು ಜನರು ಕಾಪಾಡುವಂತೆ ಅವರು ಕರೆ ನೀಡಿದ್ದರು.
SCROLL FOR NEXT