ರಾಜೀನಾಮೆ ನೀಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕೆಲ್ ಫ್ಲಿನ್
ವಾಷಿಂಗ್ಟನ್: ಉದ್ಘಾಟನೆಗೂ ಮೊದಲು ರಷ್ಯಾ ಜೊತೆಗೆ ಸಂಪರ್ಕ ಸಾಧಿಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದ್ದರಿಂದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕೆಲ್ ಫ್ಲಿನ್ ಅವರ ಬಗ್ಗೆ ನಂಬಿಕೆ ಕೆಳೆದುಕೊಂಡಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿ ರಾಜೀನಾಮೆ ಕೋರಿದ್ದರು ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸೀನ್ ಸ್ಪೈಸರ್ ಮಂಗಳವಾರ ಹೇಳಿದ್ದಾರೆ.
ವಾಷಿಂಗ್ಟನ್ ನ ರಷ್ಯಾ ರಾಯಭಾರಿ ಸೆರ್ಗಿ ಕಿಸ್ಲ್ಯಾಕ್ ಅವರೊಂದಿಗೆ ನಡೆಸಿದ ಮಾತುಕತೆಯ ಕಾನೂನು ತೊಡಕಿನಿಂದ ಫ್ಲಿನ್ ಹೊರನಡೆದಿದ್ದಾರೆ ಎಂಬುದನ್ನು ಅಲ್ಲಗೆಳೆದಿರುವ ಸ್ಪೈಸರ್, ಅವರು ಈ ಮಾತುಕತೆಯ ವಿವರಗಳ ಬಗ್ಗೆ ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಸುಳ್ಳು ಹೇಳಿದ್ದರು ಎಂದು ಸ್ಪೈಸರ್ ಹೇಳಿರುವುದಾಗಿ ಇ ಎಫ್ ಇ ನ್ಯೂಸ್ ವರದಿ ಮಾಡಿದೆ.
ಕಿಸ್ಲ್ಯಾಕ್ ಜೊತೆಗಿನ ಸಂಪರ್ಕದ ಬಗ್ಗೆ ಫ್ಲಿನ್ ಸತ್ಯ ಹೇಳಿರಲಿಲ್ಲ ಎಂದು ಟ್ರಂಪ್ ಅವರಿಗೆ ಹಲವು ವಾರಗಳ ಹಿಂದೆಯೇ ತಿಳಿದಿತ್ತು ಎಂದು ಹೇಳಿರುವ ಅಧ್ಯಕ್ಷರ ವಕ್ತಾರ, ಆದುದರಿಂದ ಅವರ ಬಗ್ಗೆ ನಂಬಿಕೆ ಕಳೆದುಕೊಂಡ ಅಧ್ಯಕರು ಬದಲಾವಣೆಗೆ ಸೂಚಿಸಿದರು ಎಂದು ಕೂಡ ತಿಳಿಸಿದ್ದಾರೆ.
ಈ ಹಿಂದೆ ಒಬಾಮಾ ಸರ್ಕಾರ ರಷ್ಯಾ ಮೇಲೆ ಹೇರಿದ್ದ ನಿರ್ಬಂಧಗಳ ಬಗ್ಗೆ ರಷ್ಯಾ ರಾಯಭಾರಿಯ ಜೊತೆ ಫ್ಲಿನ್ ದೂರವಾಣಿಯಲ್ಲಿ ಮಾತನಾಡಿದ್ದರು ಎಂಬುದನ್ನು ಅಮೆರಿಕಾ ಬೇಹುಗಾರಿಕಾ ಸಂಸ್ಥೆ ಬಯಲಿಗೆಳೆದಿತ್ತು. ನಂತರ ಸೋಮವಾರ ಸಂಜೆ ಫ್ಲಿನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ರಷ್ಯಾ ರಾಯಭಾರಿಯ ಜೊತೆಗೆ ಅಮೆರಿಕಾ ನಿರ್ಬಂಧಗಳನ್ನು ಚರ್ಚಿಸಲು ಫ್ಲಿನ್ ಅವರಿಗೆ ಟ್ರಂಪ್ ಸೂಚಿಸಿರಲಿಲ್ಲ ಎಂದು ಮಂಗಳವಾರ ಸ್ಪೈಸರ್ ಸ್ಪಷ್ಟಪಡಿಸಿದ್ದಾರೆ.