ಪ್ಯಾರಿಸ್: ಒಂದೆಡೆ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಅತ್ಯಾಧುನಿಕ ಹಾದಿ ತುಳಿದು ಡ್ರೋಣ್ ಗಳ ಮೂಲಕ ದಾಳಿಗೆ ಸಂಚು ರೂಪಿಸುತ್ತಿದ್ದರೆ, ಇತ್ತ ಫ್ರಾನ್ಸ್ ಸೇನೆ ಮಾತ್ರ ರಂಗೋಲಿ ಕೆಳಗೆ ತೂರಿ ತನ್ನ ಹದ್ದುಗಳ ಮೂಲಕ ಆ ಡ್ರೋಣ್ ಗಳನ್ನು ನಾಶಪಡಿಸುತ್ತಿದೆ.
ಹೌದು..ಭಯತ್ಪಾದಕ ಸಂಘಟನೆಗಳು ತಮ್ಮ ಉಗ್ರ ಕೃತ್ಯಕ್ಕಾಗಿ ನಾನಾ ವಿಧದ ದಾಳಿ ನಮೂನೆಗಳ ಮೂಲಕ ದಾಳಿ ಮಾಡುತ್ತಿರುವಂತೆಯೇ ಇತ್ತ ರಕ್ಷಣಾ ಪಡೆಗಳೂ ಕೂಡ ಉಗ್ರ ದಾಳಿಗಳನ್ನು ಹತ್ತಿಕ್ಕಲು ತಮ್ಮದೇ ವಿಶಿಷ್ಠ ರೀತಿಯ ಕಾರ್ಯಗಳನ್ನು ಕೈಗೊಂಡಿವೆ. ಇತ್ತೀಚೆಗೆ ಉಗ್ರರು ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಡ್ರೋಣ್ ಗಳನ್ನು ಬಳಕೆ ಮಾಡುತ್ತಿರುವುದು ವ್ಯಾಪಕವಾಗುತ್ತಿರುವಂತೆಯೇ ಅವುಗಳ ಹಾವಳಿ ತಪ್ಪಿಸಲು ಫ್ರಾನ್ಸ್ ಸೇನೆ ಮಾಸ್ಟರ್ ಪ್ಲಾನ್ ರೂಪಿಸಿದೆ. ಅದರಂತೆ ಉಗ್ರರ ಡ್ರೋಣ್ ಗಳನ್ನು ಹತ್ತಿಕ್ಕಲು ತನ್ನದೇ ಆದ ಹದ್ದುಗಳ ಪಡೆಯನ್ನೇ ಫ್ರಾನ್ಸ್ ಸೇನೆ ಸಿದ್ಧಪಡಿಸಿಕೊಂಡಿದೆ.
ಅದರಂತೆ ಬಲಿಷ್ಟ ಹದ್ದುಗಳನ್ನು ತಂದು ಅವುಗಳಿಗೆ ಸೇನಾ ತರಬೇತಿ ನೀಡಿ ಅವುಗಳನ್ನು ಪಳಗಿಸಿ ಡ್ರೋಣ್ ಗಳ ವಿರುದ್ಧ ಕಾರ್ಯಾಚರಣೆಗೆ ಬಳಕೆ ಮಾಡುತ್ತಿವೆ. ಉಗ್ರರು ಹಾರಿಸುವ ಡ್ರೋಣ್ ಗಳನ್ನು ಈ ಹದ್ದುಗಳು ಗುರುತಿಸಿ ಅವುಗಳ ಬೆನ್ನಟ್ಟಿ ಡ್ರೋಣ್ ಅನ್ನು ನಾಶಪಡಿಸುತ್ತವೆ. ಹೀಗಾಗಿ ಉಗ್ರರ ಡ್ರೋಣ್ ಗಳನ್ನು ನಾಶ ಮಾಡುವ ಹದ್ದುಗಳಿಗೆ ತಿನ್ನಲು ಮಾಂಸ ನೀಡಲಾಗುತ್ತದೆಯಂತೆ.
ಫ್ರಾನ್ಸ್ ಸೇನೆ ಪ್ರತಿಯೊಂದು ಹದ್ದುಗಳಿಗೂ ತನ್ನದೇ ವ್ಯಾಪ್ತಿ ನೀಡಿದ್ದು, ತನ್ನ ವ್ಯಾಪ್ತಿಯಲ್ಲಿ ಗಾಳಿಯಲ್ಲಿ ಬರುವ ಯಾವುದೇ ಸಂಶಯಾಸ್ಪದ ವಸ್ತುಗಳನ್ನು ಈ ಹದ್ದುಗಳು ಗುರುತಿಸಿ ಅವುಗಳ ಮೇಲೆ ದಾಳಿ ಮಾಡುತ್ತವೆ. ಹೀಗೆ ಕಾರ್ಯಾಚರಣೆಗೆ ನಿಯೋಜನೆಗೊಂಡ ಹದ್ದುಗಳು ಎಷ್ಟು ನಿಪುಣ ರೀತಿಯಲ್ಲಿ ಸಿದ್ಧವಾಗಿವೆ ಎಂದರೆ ಕೇವಲ 20 ಸೆಕೆಂಡ್ ಗಳಲ್ಲಿ ಬರೊಬ್ಬರಿ 200 ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸುತ್ತವೆಯಂತೆ. ಅಲ್ಲದೆ ಈ ವೇಳೆ ಉಗ್ರರ ಡ್ರೋಣ್ ಗಳು ಕಂಡುಬಂದರೆ ಕೂಡಲೇ ಅವುಗಳ ಮೇಲೆ ದಾಳಿ ಮಾಡಿ ಅವಗಳನ್ನು ನೆಲಕ್ಕೆ ಕೆಡವಿ ಅದರಲ್ಲಿನ ಶೆಲ್ ಅನ್ನು ಕಿತ್ತೆಸೆಯುತ್ತವೆಯಂತೆ.
ಪ್ರಸ್ತುತ ಫ್ರಾನ್ಸ್ ಸೇನೆ ಬಳಿ ಇಂತಹ ನಾಲ್ಕು ನುರಿತ ಹದ್ದುಗಳಿದ್ದು, ಅವುಗಳಿಗೆ ಅ ಆರ್ಟ್ಗನ್, ಅಥೋಸ್, ಪೋರ್ತೋಸ್ ಮತ್ತು ಅರಮಿಸ್ ಎಂದು ನಾಮಕರಣ ಮಾಡಲಾಗಿದೆ. ಈಗಾಗಲೇ ಈ ಹದ್ದುಗಳ ಸಾಕಷ್ಟು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಹತ್ತಕ್ಕೂ ಹೆಚ್ಚು ಡ್ರೋಣ್ ಗಳನ್ನು ನಾಶಪಡಿಸಿವೆಯಂತೆ. ಇನ್ನು ಈ ನಾಲ್ಕು ಹದ್ದುಗಳು ಮಾತ್ರವಲ್ಲದೇ ಇನ್ನೂ ಹಲವು ಹದ್ದುಗಳು ತರಬೇತಿ ಪಡೆಯುತ್ತಿದ್ದು, ಶೀಘ್ರದಲ್ಲೇ ಕಾರ್ಯಾಚರಣೆಗೆ ಇಳಿಯಲಿವೆ ಎಂದು ಸೇನಾ ಮೂಲಗಳು ತಿಳಿಸಿವೆ.