ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಭಾರತದಂತಹ ರಾಷ್ಟ್ರಗಳ ಹೈಟೆಕ್ ಉದ್ಯೋಗಿಗಳಿಗೆ ಅನುಕೂಲವಾಗುವ ಅರ್ಹತೆಯ ಆಧಾರದ ವಲಸೆ ನೀತಿಯನ್ನು ಜಾರಿಗೆ ತರುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ.
ಅಮೆರಿಕಾ ಕಾಂಗ್ರೆಸ್ ನ್ನು ಉದ್ದೇಶಿಸಿ ಚೊಚ್ಚಲ ಭಾಷಣ ಮಾಡಿದ ಅವರು, ಕೆನಡಾ, ಆಸ್ಟ್ರೇಲಿಯಾ ಮೊದಲಾದ ದೇಶಗಳಲ್ಲಿ ಅರ್ಹತೆ ಆಧಾರದ ವಲಸೆ ನೀತಿಯಿದೆ. ಈ ವ್ಯವಸ್ಥೆಯಿಂದ ಅನೇಕ ಡಾಲರ್ ಹಣ ಉಳಿತಾಯವಾಗುವುದಲ್ಲದೆ ಕೆಲಸಗಾರರ ವೇತನವೂ ಹೆಚ್ಚಳವಾಗುತ್ತದೆ ಎಂದರು.
ಅಮೆರಿಕಾ ಮಾಜಿ ಅಧ್ಯಕ್ಷ ದಿವಂಗತ ಅಬ್ರಹಾಂ ಲಿಂಕನ್ ಅವರ ಮಾತನ್ನು ಉಲ್ಲೇಖಿಸಿದ ಡೊನಾಲ್ಡ್ ಟ್ರಂಪ್, ಲಿಂಕನ್ ಸರಿಯಾದ ಮಾತನ್ನೇ ಹೇಳಿದ್ದರು ಅವರ ಮಾತುಗಳ ಬಗ್ಗೆ ಲಕ್ಷ್ಯ ಕೊಡುವ ಸಮಯವಿದು ಎಂದು ಹೇಳಿ ಅರ್ಹತೆ ಆಧಾರದ ವಲಸೆ ನೀತಿಯನ್ನು ಪ್ರಸ್ತಾಪಿಸಿದರು.
ಈಗ ಜಾರಿಯಲ್ಲಿರುವ ಕಡಿಮೆ ನುರಿತ ವಲಸೆ ನೀತಿಯಿಂದ ಅರ್ಹತೆ ಆಧಾರದ ನೀತಿಯನ್ನು ಅಳವಡಿಸಿಕೊಂಡರೆ ಅನೇಕ ಲಾಭಗಳಿವೆ. ಅನೇಕ ಡಾಲರ್ ಗಳನ್ನು ಉಳಿತಾಯ ಮಾಡಿ ಕೆಲಸಗಾರರ ವೇತನ ಹೆಚ್ಚಿಸಬಹುದು. ಮಧ್ಯಮ ಹಾಗೂ ಬಡ ವರ್ಗಗಳ ವಲಸೆ ಕುಟುಂಬಗಳಿಗೂ ಅನುಕೂಲವಾಗುತ್ತದೆ. ಲಕ್ಷಾಂತರ ಉದ್ಯೋಗವನ್ನು ಮತ್ತೆ ಸೃಷ್ಟಿಸುವುದು ತಮ್ಮ ಉದ್ದೇಶವಾಗಿದೆ ಎಂದರು.
ನಮ್ಮ ಕೆಲಸಗಾರರನ್ನು ರಕ್ಷಣೆ ಮಾಡುವುದೆಂದರೆ ಕಾನೂನು ವಲಸೆ ನೀತಿಯನ್ನು ಸುಧಾರಿಸುವುದು ಎಂದರ್ಥ. ಈಗಿನ ವ್ಯವಸ್ಥೆ ಬಡ ಕಾರ್ಮಿಕರನ್ನು ರಕ್ಷಿಸುವುದು ಮಾತ್ರವಲ್ಲದೆ ತೆರಿಗೆದಾರರ ಮೇಲೆ ಅತೀವ ಒತ್ತಡ ಹಾಕುತ್ತದೆ.ಸರಿಯಾದ ಮತ್ತು ಧನಾತ್ಮಕ ವಲಸೆ ಸುಧಾರಣೆ ಅಮೆರಿಕಾದ ಬಡ ಮತ್ತು ಮಧ್ಯಮ ವರ್ಗದವರಿಗೆ ಉದ್ಯೋಗ ಕಲ್ಪಿಸುವುದರಿಂದ ಸಾಧ್ಯ. ಇದರಿಂದ ದೇಶದ ರಕ್ಷಣೆ ಹಾಗೂ ಕಾನೂನನ್ನು ಮರುಸ್ಥಾಪಿಸಬಹುದು ಎಂದರು.
ಭಾರತದ ಐಟಿ ವೃತ್ತಿಪರರು ಸೇರಿದಂತೆ ವಿದೇಶಿ ವೃತ್ತಿಪರರು ಅಮೆರಿಕಾಕ್ಕೆ ಹೆಚ್-1ಬಿ ವೀಸಾದಡಿ ಹೋಗುತ್ತಾರೆ. ವಿದೇಶಗಳಿಂದ ಅಮೆರಿಕಾಕ್ಕೆ ಹೋಗುವವರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚು. ಇಲ್ಲಿಂದ ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್ ಗಳು ಮತ್ತು ಇತರ ಅತಿ ಕುಶಲ ವೃತ್ತಿಪರರು ಅಮೆರಿಕಾಕ್ಕೆ ಹೋಗುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos