ಬರಾಕ್ ಒಬಾಮಾರ ದ್ವಿತೀಯ ಪುತ್ರಿ ಸಾಶಾ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ನಿನ್ನೆ ಚಿಕಾಗೊದಲ್ಲಿ ಮಾಡಿದ ಭಾವಪೂರ್ಣ ವಿದಾಯ ಭಾಷಣವನ್ನು ಈಗಾಗಲೇ ಅಸಂಖ್ಯಾತ ಮಂದಿ ವೀಕ್ಷಿಸಿದ್ದಾರೆ. ಅರ್ಥಗರ್ಭಿತವಾದ ಮಾತುಗಳಿಂದ ಕಣ್ಣಲ್ಲಿ ಭಾಷ್ಪ ಸುರಿಸುತ್ತಾ ತಮ್ಮ ಮಡದಿ, ಮಕ್ಕಳ ಬಗ್ಗೆಯೂ ಅಭಿಮಾನದ ಮಾತುಗಳನ್ನು ಆಡಿದ್ದಾರೆ.
ವಿದಾಯ ಭಾಷಣ ಮುಗಿದ ನಂತರ ಬರಾಕ್ ಒಬಾಮಾ ಅವರ ಮಡದಿ ಮೈಕೆಲ್ ಒಬಾಮಾ ಮತ್ತು ಮಗಳು ಮಲಿಯಾ ವೇದಿಕೆ ಮೇಲೆ ಬಂದು ಜನರತ್ತ ನಗೆ ಬೀರಿ ಕೈ ಬೀಸಿದರು. ಅದು ಎಂಟು ವರ್ಷಗಳ ಹಿಂದಿನ ನೆನಪನ್ನು ಮರುಕಳಿಸುವಂತೆ ಮಾಡಿತ್ತು. ಅಂದು ಒಬಾಮಾ ಅಧ್ಯಕ್ಷರಾಗಿ ಆಯ್ಕೆಯಾದಾಗಲೂ ಕೂಡ ಇದೇ ನಗರದಲ್ಲಿ ತಮ್ಮ ಮಡದಿ, ಮಕ್ಕಳೊಂದಿಗೆ ಗೆಲುವಿನ ಯಾತ್ರೆ ನಡೆಸಿದ್ದರು. ಆದರೆ ನಿನ್ನೆಯ ಕಾರ್ಯಕ್ರಮದಲ್ಲಿ ಓರ್ವ ಸದಸ್ಯೆಯ ಗೈರುಹಾಜರಿ ಎದ್ದು ಕಾಣುತ್ತಿತ್ತು. ಅದು ಒಬಾಮಾರ ಎರಡನೇ ಮಗಳು ಸಾಶಾ.
ಕೂಡಲೇ ಜನರು ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ಸಾಶಾ ಸಮಾರಂಭಕ್ಕೆ ಬರಲಿಲ್ಲ ಎಂದು ಟ್ವಿಟ್ಟರ್ ನಲ್ಲಿ ಕೇಳಲಾರಂಭಿಸಿದರು. ತನ್ನ ತಂದೆಯ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದಷ್ಟು ಮುಖ್ಯ ಕೆಲಸ ಅವಳಿಗೇನಿತ್ತು ಎಂದು ಪ್ರಶ್ನಿಸತೊಡಗಿದರು.
ತಕ್ಷಣ ಅದಕ್ಕೆ ಉತ್ತರ ಸಿಕ್ಕಿತು. ಆಕೆಗೆ ನಿನ್ನೆ ಬೆಳಗ್ಗೆ ಶಾಲೆಯಲ್ಲಿ ಪರೀಕ್ಷೆ ಇತ್ತು ಎಂದು ಶ್ವೇತ ಭವನದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇಡೀ ಕುಟುಂಬ ಚಿಕಾಗೊಗೆ ಪ್ರಯಾಣ ಬೆಳೆಸಿದ್ದರೆ, ಸಾಶಾ ಮಾತ್ರ ವಾಷಿಂಗ್ಟನ್ ಡಿ.ಸಿ.ಯಲ್ಲಿಯೇ ಉಳಿದುಕೊಂಡಳಂತೆ.
15 ವರ್ಷದ ಸಾಶಾ ವಾಷಿಂಗ್ಟನ್ ಡಿ.ಸಿಯಲ್ಲಿ ಸಿಡ್ ವೆಲ್ಲ್ ಫ್ರೆಂಡ್ಸ್ ಸ್ಕೂಲ್ ನಲ್ಲಿ ಓದುತ್ತಿದ್ದಾಳೆ. ಶಾಲೆಯ ವೆಬ್ ಸೈಟ್ ನಲ್ಲಿ ಪೌಢಶಾಲೆಯ ವಿದ್ಯಾರ್ಥಿಗಳಿಗೆ ವರ್ಷದ ಮಧ್ಯಭಾಗದಲ್ಲಿ ಪರೀಕ್ಷೆ ನಡೆಯುತ್ತಿದ್ದು ಅದರ ಪ್ರಕಾರ ನಿನ್ನೆ ಬೆಳಗ್ಗೆ 10 ಗಂಟೆಗೆ ಸಾಶಾಗೆ ವಿಜ್ಞಾನ ಪರೀಕ್ಷೆಯಿತ್ತು.
''ಶಾಲೆಯ ನಿಯಮವನ್ನು ಕೂಡ ಅದರಲ್ಲಿ ಹೇಳಲಾಗಿದ್ದು, ಪ್ರಕಟಿತ ದಿನಾಂಕದಲ್ಲಿಯೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು. ಬೇರೆ ಕಡೆ ಪ್ರಯಾಣ ಹೋಗಲಿರುವುದು ಪರೀಕ್ಷಾ ದಿನಾಂಕವನ್ನು ಮುಂದೂಡಲು ಇರುವ ಪ್ರಮುಖ ಕಾರಣವಲ್ಲ'' ಎಂದು ಬರೆಯಲಾಗಿತ್ತು. ಹೀಗಾಗಿ ಪರೀಕ್ಷೆ ಬಿಟ್ಟು ಸಾಶಾಗೆ ತನ್ನ ತಂದೆಯ ವಿದಾಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.
ಶಾಲೆಯ ಬದ್ಧತೆಯಿಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದು ಸಾಶಾಗೆ ಇದೇ ಮೊದಲ ಬಾರಿಯಲ್ಲ. ಕಳೆದ ಮಾರ್ಚ್ ನಲ್ಲಿ ಬರಾಕ್ ಒಬಾಮಾ, ಅಧ್ಯಕ್ಷೀಯ ಅವಧಿ ಮುಗಿದ ನಂತರವೂ ಸಾಶಾಳ ಹೈಸ್ಕೂಲ್ ವಿಧ್ಯಾಭ್ಯಾಸ ಮುಗಿಯುವವರೆಗೆ ವಾಷಿಂಗ್ಟನ್ ನಲ್ಲಿಯೇ ಇರುತ್ತೇವೆ. ಮಧ್ಯದಲ್ಲಿ ಬಿಟ್ಟು ಹೋದರೆ ಮಗಳ ವಿಧ್ಯಾಭ್ಯಾಸಕ್ಕೆ ಕಷ್ಟವಾಗುತ್ತದೆ ಎಂದು ಹೇಳಿದ್ದರು.