ಬೀಜಿಂಗ್: ತನ್ನ ಬದ್ಧ ಶತ್ರು ವಿಯೆಟ್ನಾಂಗೆ ಭಾರತ ಆಕಾಶ್ ಕ್ಷಿಪಣಿ ಮಾರಾಟ ಒಪ್ಪಂದಕ್ಕೆ ಸಂಬಂಧಿಸಿದಂತೆ ಚೀನಾ ದೇಶ ಕುದ್ದುಹೋಗಿದ್ದು, ಭಾರತದ ನಡೆಯಿಂದ ಪ್ರಾದೇಶಿಕ ಅಶಾಂತಿ ತಲೆದೋರಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಚೀನಾ ಸರ್ಕಾರದ ಮುಖವಾಣಿ ಪತ್ರಿಕೆಯೊಂದರಲ್ಲಿ ಭಾರತ ಮತ್ತು ವಿಯೆಟ್ನಾಂ ಸೇನಾ ಸಹಭಾಗಿತ್ವವನ್ನು ಪ್ರಸ್ತಾಪಿಸಲಾಗಿದ್ದು, ಭಾರತ ಮತ್ತು ವಿಯೆಟ್ನಾಂ ನಡುವಿನ ಶಸ್ತ್ರಾಸ್ತ್ರ ಒಪ್ಪಂದಗಳಿಂದಾಗಿ ವಿವಾದಿತ ಗಡಿ ಪ್ರದೇಶದಲ್ಲಿ ಆಶಾಂತಿ ತಲೆದೋರಲಿದೆ. ಆಗ ಖಂಡಿತಾ ಚೀನಾ ತನ್ನ ಕೈಕಟ್ಟಿ ಕೂರುವುದಿಲ್ಲ. ತನ್ನ ರಕ್ಷಣೆಗೆ ಕೈಗೊಳ್ಳಬೇಕಾದ ಎಲ್ಲ ಕಠಿಣ ನಿರ್ಣಯಗಳನ್ನೂ ಕೈಗೊಳ್ಳಲು ಚೀನಾ ಸಮರ್ಥವಾಗಿದೆ ಎಂದು ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ನೀಡಿದೆ.
ಬೀಜಿಂಗ್ ವಿರುದ್ಧ ಸೇಡಿಗಾಗಿ ಭಾರತ ವಿಯೆಟ್ನಾಂನೊಂದಿಗೆ ಸೇನಾ ಸಹಭಾಗಿತ್ವ ಸಾಧಿಸುತ್ತಿರುವುದೇ ಆದರೆ ಪ್ರಾದೇಶಿಕ ಅಶಾಂತಿ ತಲೆದೋರುತ್ತದೆ. ಆಗ ಖಂಡಿತ ಚೀನಾ ಮುಲಾಜಿಲ್ಲದೇ ತನ್ನ ಶಕ್ತಿ ಸಾಮರ್ಥ್ಯ ಪ್ರದರ್ಶಿಸಬೇಕಾಗುತ್ತದೆ ಎಂದು ಗ್ಲೋಬಲ್ ಟೈಮ್ಸ್ ಸಂಪಾದಕೀಯದಲ್ಲಿ ಟೀಕೆ ಮಾಡಲಾಗಿದೆ.
ವಿಯೆಟ್ನಾಂಗೆ ಭಾರತ ತನ್ನ ಆಕಾಶ್ ಕ್ಷಿಪಣಿಗಳನ್ನು ಮಾರಾಟ ಮಾಡಿದ್ದು, ಇದನ್ನು ಭಾರತೀಯ ಮಾಧ್ಯಮಗಳು ಚೀನಾಗೆ ಟಾಂಗ್ ನೀಡುವ ಉದ್ದೇಶದಿಂದ ಭಾರತ ವಿಯೆಟ್ನಾಂಗೆ ಕ್ಷಿಪಣಿ ಮಾರಾಟ ಮಾಡಿದೆ ಎಂದು ವರದಿ ಪ್ರಕಟಿಸುತ್ತಿವೆ ಎಂದು ಗ್ಲೋಬಲ್ ಟೈಮ್ಸ್ ಕಿಡಿಕಾರಿದೆ.
ಇದೇ ವೇಳೆ ವಿಯೆಂಟ್ನಾಂಗೆ ಪರೋಕ್ಷ ಎಚ್ಚರಿಕೆ ನೀಡಿರುವ ಗ್ಲೋಬಲ್ ಟೈಮ್ಸ್ ವಿಯೆಟ್ನಾಂ ದಕ್ಷಿಣ ಚೀನಾ ಸಮುದ್ರ ವಿವಾದವನ್ನು ಬದಿಗೊತ್ತಿ ಚೀನಾದೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದು ಹೇಳಿದೆ.