ವಿದೇಶ

ಟ್ರಂಪ್ ಗುಪ್ತಚರ ಸಮುದಾಯದ ಬಗ್ಗೆ ಕೃತಜ್ಞತೆ ಬೆಳೆಸಿಕೊಳ್ಳಬೇಕು: ಸಿಐಎ ನಿರ್ದೇಶಕ

Srinivas Rao BV
ವಾಷಿಂಗ್ ಟನ್: ಜ.20 ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡೊನಾಲ್ಡ್ ಟ್ರಂಪ್ ಗುಪ್ತಚರ ಸಮುದಾಯದ ಬಗ್ಗೆ ಕೃತಜ್ಞತೆ ಬೆಳೆಸಿಕೊಳ್ಳಬೇಕು, ಹಾಗೂ ಗುಪ್ತಚರ ಸಂಸ್ಥೆಗಳ ಬಗ್ಗೆ ವಿಶ್ವಾಸ ಹೊಂದಬೇಕು ಎಂದು ಸಿಐಎ ನಿರ್ದೇಶಕ ಜಾನ್‌ ಬ್ರೆನ್ನನ್‌ ಸಲಹೆ ನೀಡಿದ್ದಾರೆ. 
ಸಂದರ್ಶನವೊಂದರಲ್ಲಿ ಮಾತನಾಡಿರುವ ಸಿಐಎ ನಿರ್ದೇಶಕ ಹೊಸ ಅಧ್ಯಕ್ಷರು ಹಾಗೂ ಅವರ ತಂಡಕ್ಕೆ ಗುಪ್ತಚರ ಇಲಾಖೆ ಸಮಸ್ಯೆ ಉಂಟುಮಾಡುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ತಂಡಕ್ಕೆ ಅಡಚಣೆ ಉಂಟು ಮಾಡುವ ಉದ್ದೇಶ ನಮಗೆ ಇಲ್ಲ. ಆದರೆ ಅವರಿಗೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ತಿಳಿಸುವುದು ನಮ್ಮ ಕರ್ತವ್ಯ ಎಂದು ಬ್ರೆನ್ನನ್ ಹೇಳಿದ್ದಾರೆ. 
ರಷ್ಯಾ ಸೈಬರ್ ದಾಳಿ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಗುಪ್ತಚರ ಇಲಾಖೆ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಗುಪ್ತಚರ ಇಲಾಖೆಯಿಂದ ಹಲವು ಮಾಹಿತಿಗಳು ಸೋರಿಕೆಯಾಗಿವೆ ಎಂಬ ಡೊನಾಲ್ಡ್ ಟ್ರಂಪ್ ಆರೋಪಕ್ಕೆ ಆಧಾರಗಳಿಲ್ಲ ಎಂದು ಬ್ರೆನ್ನನ್ ಹೇಳಿದ್ದಾರೆ. 
ಡೊನಾಲ್ಡ್ ಟ್ರಂಪ್ ಅವರು ಗುಪ್ತಚರ ಇಲಾಖೆಯ ಹೇಳಿಕೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಇಲ್ಲದಿದ್ದರೆ ಅದು ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರಲಿದೆ ಎಂದು ಸಿಐಎ ನಿರ್ದೇಶಕ ಜಾನ್ ಬ್ರೆನ್ನನ್ ಹೇಳಿದ್ದಾರೆ. ಒಂದು ವೇಳೆ ಅಮೆರಿಕದ ಗುಪ್ತಚರ ಸಂಸ್ಥೆಗಳ ಮೇಲೆ ಡೊನಾಲ್ಡ್ ಟ್ರಂಪ್ ಗೆ ವಿಶ್ವಾಸವಿಲ್ಲ ಎಂಬುದಾದರೆ ಅದು ನಮ್ಮ ಮಿತ್ರ ರಾಷ್ಟ್ರಗಳು, ಶತ್ರು ಪಡೆಗಳಿಗೆ ಯಾವ ರೀತಿಯ ಸಂದೇಶ ರವಾನೆ ಮಾಡಲಿದೆ? ಎಂದು ಬ್ರೆನ್ನನ್ ಆತಂಕ ವ್ಯಕ್ತಪಡಿಸಿದ್ದಾರೆ. 
SCROLL FOR NEXT