ನ್ಯೂಯಾರ್ಕ್: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಸ್ಥಾನ ದೊರೆಯುವ ಬಗ್ಗೆ ವರದಿ ಪ್ರಕಟವಾಗಿದ್ದ ಬೆನ್ನಲ್ಲೇ, ಅಮೆರಿಕದ ಸಂವಹನ ಆಯೋಗಕ್ಕೆ ಭಾರತೀಯ ಅಮೆರಿಕನ್ ವ್ಯಕ್ತಿ ಮುಖ್ಯಸ್ಥರಾಗಿ ನೇಮಕವಾಗುವ ಸಾಧ್ಯತೆ ಇದೆ.
ಊಹಾಪೋಹಗಳಿಗೆ ಪೂರಕವಾಗಿ ಭಾರತೀಯ-ಅಮೆರಿಕನ್ ಅಜಿತ್ ಪೈ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ್ದಾರೆ. ಫೆಡರಲ್ ಸಂವಹನ ಆಯೋಗದ ಮುಖ್ಯಸ್ಥ ಸ್ಥಾನಕ್ಕೆ ರಿಪಬ್ಲಿಕನ್ ಅಭ್ಯರ್ಥಿಯಾಗಿರುವ ಅಜಿತ್ ಪೈ ಟ್ರಂಪ್ ಅವರನ್ನು ಭೇಟಿ ಮಾಡಿರುವುದನ್ನು ಟ್ರಂಪ್ ಅವರ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಟಾಮ್ ವೀಲ್ಹರ್ ಪ್ರಸ್ತುತ ಅಮೆರಿಕದ ಸಂವಹನ ಆಯೋಗಕ್ಕೆ ಮುಖ್ಯಸ್ಥರಾಗಿದ್ದು, ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಹಿನ್ನೆಲೆಯಲ್ಲಿ ಸಂವಹನ ಆಯೋಗದ ಮುಖ್ಯಸ್ಥರೂ ಬದಲಾಗಲಿದ್ದಾರೆ. ಆಯೋಗದ ಮುಖ್ಯಸ್ಥರ ಬದಲಾವಣೆಗೆ ಸೆನೆಟ್ ಅನುಮತಿ ಅಗತ್ಯವಿದ್ದು, ರೇಡಿಯೋ, ದೂರದರ್ಶನ, ದೂರವಾಣಿ, ಸೆಲ್ಫೋನ್ ಸ್ಪೆಕ್ಟ್ರಮ್ ಮತ್ತು ಸೇವೆಗಳು ನಿಯಂತ್ರಿಸುವ ಸಂಸ್ಥೆಯಾಗಿದೆ.
ಡೊನಾಲ್ಡ್ ಟ್ರಂಪ್ ಭಾರತೀಯ ಮೂಲದವರಾದ ನಿಕ್ಕಿ ಹ್ಯಾಲಿ ಅವರನ್ನು ವಿಶ್ವಸಂಸ್ಥೆಯ ರಾಯಭಾರಿಯನ್ನಾಗಿ ಹಾಗೂ ಸೀಮಾ ವರ್ಮಾ ಅವರನ್ನು ಸರ್ಕಾರಿ ಆರೋಗ್ಯ ವಿಮೆ ಯೋಜನೆಗಳ ಸಂಸ್ಥೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ. ಅಷ್ಟೇ ಅಲ್ಲದೇ ಭಾರತೀಯ ಅಮೆರಿಕನ್ನರಾದ ರಾಜ್ ಶಾ ಅವರನ್ನು ಶ್ವೇತ ಭವನದ ಸಂಶೋಧನಾ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics