ವಾಷಿಂಗ್ಟನ್: ಜನರ ಸಹಮತದೊಂದಿಗೆ ಚುನಾವಣೆಯಲ್ಲಿ ಗೆದ್ದು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೇರಿದ್ದರೂ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಅಮೆರಿಕಾದಾದ್ಯಂತ ಭಾರೀ ಪ್ರತಿಭಟನೆಗಳು ನಡೆಯತೊಡಗಿವೆ.
ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲ್ಲರಿ ಕ್ಲಿಂಟನ್ ವಿರುದ್ಧ ಡೊನಾಲ್ಡ್ ಟ್ರಂಪ್ ಅವರು ಭರ್ಜರಿ ಜಯಭೇರಿ ಬಾರಿಸಿದ್ದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಯಾಗಿ ಬಂದಿರುವ ಟ್ರಂಪ್ ಅವರು ಸಹಜವಾಗಿಯೇ ಜನರ ಸಹಮತದ ಮೂಲಕ ಆಯ್ಕೆಯಾಗಿದ್ದರು. ಆದರೆ, ಜನಮತಕ್ಕೆ ತಲೆಭಾಗದ ಅಲ್ಲಿನ ಕೆಲ ಸಂಘಟನೆಗಳು ಇಂದು ಟ್ರಂಪ್ ವಿರುದ್ಧ ಅಮೆರಿಕದಲ್ಲಿ ಪ್ರತಿಭಟನೆ ನಡೆಸುತ್ತಿವೆ.
ಅಮೆರಿಕ ಕಾಲಮಾನ ಬೆಳಿಗ್ಗೆ 11.30 (ಭಾರತೀಯ ಕಾಲಮಾನ ರಾತ್ರಿ 10:30) ಕ್ಕೆ ಅಮೆರಿಕಾದ 45 ನೇ ಅಧ್ಯಕ್ಷರಾಗಿ ಡೊನಾಲ್ಡ್ ಜೆ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಅಮೆರಿಕದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗತೊಡಗಿವೆ. ಸಾವಿರಾರು ಸಂಖ್ಯೆಯಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ ಎಂದು ವರದಿಗಳು ತಿಳಿಸಿವೆ.
ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದರೂ ಟ್ರಂಪ್ ಅವರು ಅಧ್ಯಕ್ಷ ಸ್ಥಾನಕ್ಕೆ ಏರಿರುವುದರ ಹಿನ್ನಲೆಯಲ್ಲಿ ಅಮೆರಿಕದಲ್ಲಿ ಪ್ರತಿಭಟನೆಗಳು ತಾರಕ್ಕೇರಿದೆ. ನೂತನ ಅಧ್ಯಕ್ಷನಿಗೆ ಗೌರವ ಸಲ್ಲಿಸಲು ಪರೇಡ್ ನ್ನು ನಡೆಸಲಾಗುತ್ತಿದ್ದು, ಈ ವೇಳೆ ಸ್ಥಳದಲ್ಲಿದ್ದ 400-500ಕ್ಕೂ ಹೆಚ್ಚು ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲುತೂರಾಟ ಆರಂಭಿಸಿದ್ದರು. ನಂತರ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರೆನ್ನಲಾಗಿದೆ.
ಪ್ರತಿಭಟನೆಯಿಂದಾಗಿ ಅಮೆರಿಕದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಟ್ರಂಪ್ ಅವರ ವಾಹನ ಹೋಗುತ್ತಿದ್ದಂತೆ ಟ್ರಂಪ್ ಅವರ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳು ಹೋಗಿದ್ದಾರೆ. ನೀವು ನಮ್ಮ ಅಧ್ಯಕ್ಷರಲ್ಲ. ನಿಮ್ಮನ್ನು ವಿರೋಧಿಸುತ್ತೇವೆಂದು ಕೂಗಿದ್ದಾರೆ.
ಇನ್ನು ಘರ್ಷಣೆ ವೇಳೆ 217 ಜನರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಪ್ರತಿಭಟನಾಕಾರರ ವಿರುದ್ದ ಹಿಂಸಾಚಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ನಡೆಯಬಾರದು ಹಾಗೂ ಯಾರೊಬ್ಬರನ್ನು ಬಂಧನಕ್ಕೊಳಪಡಿಸಬಾರದು ಎಂದು ಉದ್ದೇಶಿಸಿದ್ದೆವು. ಆದರೆ, ಸ್ಥಳದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಹೀಗಾಗಿ ಯಾವುದೇ ದಾರಿಯಿಲ್ಲದೆ ಬಂಧನಕ್ಕೊಳಪಡಿಸಬೇಕಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಒಂದೆಡೆ ಪ್ರತಿಭಟನೆ ನಡೆಯುತ್ತರೆ ಮತ್ತೊಂದೆ ಶ್ವೇತಭವನದ ಮುಖ್ಯ ಅಧಿಕಾರಿ ರಿಚರ್ಡ್ ಸ್ಪೆನ್ಸರ್ ಅವರು ನೂತನ ಅಧ್ಯಕ್ಷರ ಕುರಿತಂತೆ ಮಾಧ್ಯಮಗಳೊಂದಿಗೆ ಹೇಳಿಕೆಗಳನ್ನು ನೀಡುತ್ತಿದ್ದರು. ಈ ವೇಳೆ ಪ್ರತಿಭಟನಾಕಾರರು ರಿಚರ್ಡ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ. ರಿಚರ್ಡ್ ಸ್ಪೆನ್ಸರ್ ಅವರ ಮುಖಕ್ಕೆ ಹೊಡೆಯಲಾಗಿದೆ. ಆದರೆ, ರಿಚರ್ಡ್ ಅವರಿಗೆ ಯಾವುದೇ ರೀತಿಯ ಗಂಭೀರ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನು ಈ ಬಗ್ಗೆ ಸ್ವತಃ ರಿಚರ್ಡ್ ಸ್ಪೆನ್ಸರ್ ಅವರೇ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದು, ನಾನು ಹೊಡೆತವನ್ನು ಸ್ವೀಕರಿಸಬಲ್ಲೆ ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆಗಳು ಆರಂಭವಾದಾಗಿನಿಂದಲೂ ಹಿಲ್ಲರಿ ಕ್ಲಿಂಟನ್ ಹಾಗೂ ಟ್ರಂಪ್ ಅವರ ನಡುವೆ ಸಾಕಷ್ಟು ಪೈಪೋಟಿಗಳು ನಡೆದಿತ್ತು. ಚುನಾವಣಾ ಸಮೀಕ್ಷೆಗಳು ಕೂಡ ಹಿಲ್ಲರಿ ಕ್ಲಿಂಟನ್ ಅವರೇ ಗೆಲುವು ಸಾಧಿಸುತ್ತಾರೆಂಬು ಭವಿಷ್ಯ ನುಡಿದಿದ್ದವು. ಆದರೆ, ಅಂತಿಮವಾಗಿ ಈ ಎಲ್ಲಾ ಭವಿಷ್ಯಗಳನ್ನು ತಲೆಕೆಳಗಾಗಿ ಮಾಡಿದ್ದ ಟ್ರಂಪ್ ಅವರು ಬಹುಮತದಿಂದ ಬರ್ಜರಿ ಗೆಲವು ಸಾಧಿಸಿದ್ದರು. ಆದರೆ, ಅಮೆರಿಕ ಇದೀಗ ಕೆಲ ವಿಚಿತ್ರ ಬೆಳವಣಿಗೆಗಳಿಗೆ ಉದಾಹರಣೆಯಾಗತೊಡಗಿದೆ.
ಬಹುಮತದಿಂದ ಟ್ರಂಪ್ ಅವರು ಗೆಲವು ಸಾಧಿಸುವಂತೆ ಮಾಡಿದ್ದ ಅಲ್ಲಿನ ಜನರೇ ಇದೀಗ ಟ್ರಂಪ್ ಅವರ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಟ್ರಂಪ್ ಅವರು ಚುನಾವಣೆಯಲ್ಲಿ ಗೆಲವು ಸಾಧಿಸಿದ ಬಳಿಕ ಕೂಡ ಅಲ್ಲಿನ ಜನರು ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಿದ್ದರು. ಇದೀಗ ಪದಗ್ರಹಣ ಸಮಾರಂಭದ ಬಳಿಕ ಕೂಡ ಅಮೆರಿಕದಲ್ಲಿ ಪ್ರತಿಭಟನೆಗಳು ಮುಂದುವರೆಯತೊಡಗಿವೆ. ನ್ಯೂಯಾರ್ಕ್ ನ ಟ್ರಂಪ್ ಟವರ್ ಹೊರಭಾಗದಲ್ಲಿ ಸಾವಿರಾರು ಅಮೆರಿಕದ ಪ್ರಜೆಗಳು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.