ವಿದೇಶ

ಮೋದಿ ಜೊತೆ ಇಂದು ಮಧ್ಯರಾತ್ರಿ ದೂರವಾಣಿ ಮೂಲಕ ಡೊನಾಲ್ಡ್ ಟ್ರಂಪ್ ಮಾತುಕತೆ

Sumana Upadhyaya
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಮಧ್ಯರಾತ್ರಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ದೂರವಾಣಿ ಮೂಲಕ ಸಂಭಾಷಣೆ ನಡೆಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. 
''ರಾಷ್ಟ್ರಾಧ್ಯಕ್ಷರು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಲಿದ್ದಾರೆ'' ಎಂದು ತಿಳಿಸಿರುವ ಶ್ವೇತಭವನ ಟ್ರಂಪ್ ಅವರ ಇಂದಿನ ಕಾರ್ಯಕ್ರಮದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ವಾಷಿಂಗ್ಟನ್ ಡಿ.ಸಿ ಅವಧಿ ಮಧ್ಯಾಹ್ನ 1 ಗಂಟೆಯಾಗಿದ್ದು ಅದು ಭಾರತೀಯ ಕಾಲಮಾನ ರಾತ್ರಿ 11.30 ಆಗಿದೆ. ಈ ಮೂಲಕ ಡೊನಾಲ್ಡ್ ಟ್ರಂಪ್ ಅವರು ಮೊನ್ನೆ 20ರಂದು ಅಧಿಕಾರ ವಹಿಸಿಕೊಂಡ ನಂತರ ವಿದೇಶದ ನಾಯಕರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸುವ 5ನೇ ವಿದೇಶಿ ನಾಯಕ ಮೋದಿಯವರಾಗಿದ್ದಾರೆ. 
ಮೊನ್ನೆ 21ರಂದು ಟ್ರಂಪ್ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡ್ಯು ಮತ್ತು ಮೆಕ್ಸಿಕಾದ ಪ್ರಧಾನಿ ಪೆನಾ ನಿಯಟೊ ಅವರೊಂದಿಗೆ ಮಾತುಕತೆ ನಡೆಸಿದ್ದರು. ಮೊನ್ನೆ ಭಾನುವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ನಿನ್ನೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫಟ್ಟಾ ಎಲ್ಸಿಸ್ ಅವರೊಂದಿಗೆ ಉಭಯ ಕುಶಲೋಪರಿ ನಡೆಸಿದ್ದರು.
ಡೊನಾಲ್ಡ್ ಟ್ರಂಪ್ ಅವರು ಆಶ್ಚರ್ಯಕರ ರೀತಿಯಲ್ಲಿ ನವೆಂಬರ್ 8ರಂದು ಅಧ್ಯಕ್ಷರಾಗಿ  ಐತಿಹಾಸಿಕ ಗೆಲುವು ಸಾಧಿಸಿದಾಗ  ಅವರಿಗೆ ಅಭಿನಂದನೆ ಸಲ್ಲಿಸಿದ ವಿಶ್ವದ ಐವರು ಮೊದಲ ನಾಯಕರಲ್ಲಿ ಪ್ರಧಾನಿ ಮೋದಿಯವರು ಒಬ್ಬರಾಗಿದ್ದರು.
ಡೊನಾಲ್ಡ್ ಟ್ರಂಪ್ ಈ ಹಿಂದೆ ಪ್ರಧಾನಿ ಮೋದಿಯವರ ಕಾರ್ಯವೈಖರಿ, ಅವರ ಅಧಿಕಾರದಲ್ಲಿ ದೇಶ ಪ್ರಗತಿ ಹೊಂದುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
SCROLL FOR NEXT