ಒಟ್ಟಾವ: ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿಯಿಂದ ಅಮೆರಿಕಾದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡವರಿಗೆ ಕೆನಡಾ ಆಶ್ರಯ ನೀಡಲು ಮುಂದಾಗಿದೆ.
ಈ ಬಗ್ಗೆ ಕೆನಡಾದ ವಲಸೆ ಸಚಿವಾಲಯ ಹೇಳಿಕೆ ನೀಡಿದ್ದು, ಅಮೆರಿಕಾದಲ್ಲಿ ಕಠಿಣ ವಲಸೆ ನೀತಿಯಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ತಾತ್ಕಾಲಿಕ ಆಶ್ರಯ ನೀಡುತ್ತೇವೆ, ಈ ರೀತಿ ಈ ಹಿಂದೆಯೂ ಮಾಡಿದ್ದೇವೆ ಎಂದು ಅಲ್ಲಿನ ವಲಸೆ ಇಲಾಖೆಯ ಸಚಿವ ಅಹ್ಮದ್ ಹುಸೇನ್ ಹೇಳಿದ್ದಾರೆ.
ಜ.27 ರಂದು ಡೊನಾಲ್ಡ್ ಟ್ರಂಪ್ 7 ಇಸ್ಲಾಮಿಕ್ ರಾಷ್ಟ್ರಗಳ ಪ್ರಜೆಗಳು ಅಮೆರಿಕಾ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಿ, ವಲಸೆ ನೀತಿಗಳನ್ನು ಕಠಿಣಗೊಳಿಸಿ ಆದೇಶ ಹೊರಡಿಸಿದ್ದರು. ಟ್ರಂಪ್ ಆದೇಶ ಹೊರಡಿಸಿರುವ 7 ರಾಷ್ಟ್ರಗಳ ಪೈಕಿ ಸೊಮಾಲಿಯೂ ಒಂದಾಗಿದ್ದು, ಕೆನಡಾದ ಸಚಿವ ಸೊಮಾಲಿಯ ಮೂಲದವರಾಗಿದ್ದಾರೆ.
ಇದೇ ವೇಳೆ ಅಮೆರಿಕ-ಕೆನಡಾ ಉಭಯ ರಾಷ್ಟ್ರಗಳ ಪೌರತ್ವವನ್ನು ಹೊಂದಿರುವ ಕೆನಡಾದ ಪ್ರಜೆಗಳಿಗೆ ಟ್ರಂಪ್ ಆದೇಶದಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಹುಸೇನ್ ಹೇಳಿದ್ದಾರೆ. ಅಷ್ಟೇ ಅಲ್ಲದೇ ಟ್ರಂಪ್ ನಿರ್ಬಂಧಿಸಿರುವ 7 ಇಸ್ಲಾಮಿಕ್ ರಾಷ್ಟ್ರಗಳ ಪ್ರಜೆಗಳು ಕೆನಡಾದ ಶಾಶ್ವತ ನಿವಾಸಿಗಳಾಗಿದ್ದರೆ, ಅವರಿಗೂ ಟ್ರಂಪ್ ಆದೇಶದಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
35,000 ಕ್ಕೂ ಹೆಚ್ಚು ಕೆನಡಾದ ನಾಗರಿಕರು ಉಭಯ ದೇಶಗಳ ಪೌರತ್ವ ಪಡೆದುಕೊಂಡಿದ್ದಾರೆ ಅಥವ ಶಾಶ್ವತ ನಿವಾಸಿಗಳಾಗಿದ್ದಾರೆ ಎಂದು ಅಹ್ಮದ್ ಹುಸೇನ್ ಮಾಹಿತಿ ನೀಡಿದ್ದಾರೆ.