ವಿದೇಶ

ಟ್ರಂಪ್ ವಲಸೆ ನೀತಿಗೆ ಗೂಗಲ್ ಸಿಇಒ ಸುಂದರ್ ಪಿಚ್ಚೈ ಟೀಕೆ

Srinivas Rao BV
ಸ್ಯಾನ್ ಫ್ರಾನ್ಸಿಸ್ಕೋ: ಮುಸ್ಲಿಮರು ಬಹುಸಂಖ್ಯಾತರಾಗಿರುವ ದೇಶದ ಪ್ರಜೆಗಳಿಗೆ ಅಮೆರಿಕಾ ಪ್ರವೇಶವನ್ನು ನಿರ್ಬಂಧಿಸಿರುವ ಡೊನಾಲ್ಡ್ ಟ್ರಂಪ್ ಸರ್ಕಾರದ ವಲಸೆ ನೀತಿಗೆ ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್ ಬುಕ್ ನಿಂದ ಟೀಕೆ ಕೇಳಿಬಂದ ಬೆನ್ನಲ್ಲೇ ಸರ್ಚ್ ಇಂಜಿನ್ ಗೂಗಲ್ ನಿಂದಲೂ ಸಹ ಟೀಕೆ ವ್ಯಕ್ತವಾಗಿದೆ. 
ಟ್ರಂಪ್ ಆದೇಶದಿಂದ ಗೂಗಲ್ ಸಂಸ್ಥೆಯ ಕನಿಷ್ಠ 187 ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಲಿದೆ. ಅಷ್ಟೇ ಅಲ್ಲದೇ, ಹೊರ ದೇಶಗಳಿಂದ ಹೊಸ ಪ್ರತಿಭೆಗಳ ಆಕರ್ಷಣೆಗೆ ಧಕ್ಕೆ ಉಂಟಾಗಲಿದೆ ಎಂದು ಸುಂದರ್ ಪಿಚ್ಚೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಪ್ರಯಾಣದಲ್ಲಿರುವ ಗೂಗಲ್ ನ ಉದ್ಯೋಗಿಗಳಿಗೆ ವಾಪಸ್ ಅಮೆರಿಕಾಗೆ ಬರುವಂತೆ ಸೂಚನೆ ನೀಡಿದೆ. 
ಡೊನಾಲ್ಡ್ ಟ್ರಂಪ್ ವಲಸೆ ಆದೇಶದಿಂದ ಉಂಟಾಗುವ ನಂತರದ ಪರಿಣಾಮಗಳ ಬಗ್ಗೆ ಗೂಗಲ್ ನ ಉದ್ಯೋಗಿಗಳಿಗೆ ಕಳಿಸಲಾಗಿರುವ ಇ-ಮೇಲ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಸುಂದರ್ ಪಿಚ್ಚೈ, ಟ್ರಂಪ್ ಸರ್ಕಾರದ ಆದೇಶ ಗೂಗಲ್ ಉದ್ಯೋಗಿಗಳು ಹಾಗೂ ಅವರ ಕುಟುಂಬಗಳಿಗೆ ನಿರ್ಬಂಧ ವಿಧಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. 
ಅಮೆರಿಕಾದ ಕಾರ್ಯಾಂಗದ ಆದೇಶದಿಂದ ಸಂಸ್ಥೆಯ ಉದ್ಯೋಗಿಗಳು ವೈಯಕ್ತಿಕವಾಗಿ ನೋವನ್ನು ಎದುರಿಸುವಂತಾಗಿದೆ ಎಂದು ಸುಂದರ್ ಪಿಚ್ಚೈ ಹೇಳಿದ್ದಾರೆ. ಗೂಗಲ್ ಗೂ ಮುನ್ನ ಫೇಸ್ ಬುಕ್ ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿಯನ್ನು ಟೀಕಿಸಿತ್ತು. 
SCROLL FOR NEXT