ನರೇಂದ್ರ ಮೋದಿ-ಇಸ್ರೇಲ್ ಪ್ರಧಾನಿ ನೇತನ್ಯಾಹು
ಪ್ಯಾಲೆಸ್ತೇನ್: ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಗೆ ಭೇಟಿ ನೀಡುತ್ತಿದ್ದಂತೆಯೇ ಪ್ಯಾಲೆಸ್ತೇನ್ ನಿಂದ ಕೂಗು ಕೇಳಲಾರಂಭಿಸಿದ್ದು, ಇಲ್ಲಿಗೂ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಬೇಕಿತ್ತು ಎಂಬ ಆಲಾಪ ಪ್ರಾರಂಭವಾಗಿದೆ.
ಜೆರುಸಲೇಮ್ ನಿಂದ 85 ಕಿಮೀ ದೂರದಲ್ಲಿರುವ ಹಮಾಸ್ ನಿಯಂತ್ರಿತ ಗಾಜಾ ಪಟ್ಟಿಯಲ್ಲಿರುವ ಹಲವರು ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ಯಾಲೆಸ್ತೇನ್ ನೊಂದಿಗೂ ಭಾರತ ಅತ್ಯುತ್ತಮ ಸಂಬಂಧ ಹೊಂದಿದೆ ಎಂದು ನಂಬಿದ್ದೇವೆ, ಗಾಜಾ ಗೂ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ 2000 ರಲ್ಲಿ ಜಸ್ವಂತ್ ಸಿಂಗ್, 2012 ರಲ್ಲಿ ಎಸ್ಎಂ ಕೃಷ್ಣ, 2016 ರಲ್ಲಿ ಸುಷ್ಮಾ ಸ್ವರಾಜ್ ಇಸ್ರೇಲ್ ಗೆ ಭೇಟಿ ನೀಡಿದ್ದರಾದರೂ ಈ ಎಲ್ಲಾ ನಾಯಕರಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿ ನಿಯಮಿತವಾಗಿದ್ದು ಪ್ಯಾಲೆಸ್ತೇನ್ ಭೇಟಿ ಪ್ರವಾಸದ ಪಟ್ಟಿಯಲ್ಲಿಲ್ಲ.
ಮಲ್ಟಿ ಮೀಡಿಯಾ ಸಂಸ್ಥೆಯನ್ನು ಹೊಂದಿರುವ ಟೋಬೆಲ್ ಎಂಬ ವ್ಯಕ್ತಿ ಭಾರತೀಯ ಮೂಲದ ವ್ಯಕ್ತಿಯನ್ನು ವಿವಾಹವಾಗಿದ್ದು, ಚಂಡೀಘರ್ ನಲ್ಲೂ ವಾಸಿಸಿದ್ದರು. ಈಗ ಕಿರುಚಿತ್ರಗಳನ್ನು ನಿರ್ಮಿಸಿ ಗಾಜಾ ವೆಬ್ ಸೈಟ್ ಗಳನ್ನು ನಿರ್ವಹಣೆ ಮಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಗಾಜಾ ಪಟ್ಟಿಗೂ ಭೇಟಿ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ಯಾಲೆಸ್ತೇನ್ ನಲ್ಲಿ ವಿದ್ಯುತ್ ಸಮಸ್ಯೆ ಇದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಗೆ ಬಂದಿದ್ದರೆ ವಿದ್ಯುತ್ ಕ್ಷೇತ್ರದಲ್ಲಿನ ಸಹಕಾರಕ್ಕೆ ಅವರಿಗೆ ಮನವಿ ಮಾಡುತ್ತಿದ್ದೆವು ಎಂದು ಟೋಬೆಲ್ ಹೇಳಿರುವುದನ್ನು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಪ್ಯಾಲೆಸ್ತೇನ್ ನ ದಾಳಿಗಳನ್ನು ಮೆಟ್ಟಿ ನಿಂತಿರುವ ಇಸ್ರೇಲ್ ಪ್ಯಾಲೆಸ್ತೇನ್ ರಾಷ್ಟ್ರದೊಡನೆಯ ನಿರಂತರ ಹೋರಾಟ ನಡೆಸುತ್ತಲೇ ಇದ್ದು, ಉಭಯ ರಾಷ್ಟ್ರಗಳ ನಡುವೆ ಸೌಹಾರ್ದಯುತ ಸಂಬಂಧ ಹದಗೆಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics