ವಿದೇಶ

ಗಡಿ ವಾತಾವರಣ ಗಂಭೀರವಾಗಿದ್ದು, ಶಾಂತಿ ಬೇಕೋ, ಯುದ್ಧ ಬೇಕೋ ನಿರ್ಧರಿಸಿ: ಭಾರತಕ್ಕೆ ಚೀನಾ

Manjula VN
ಬೀಜಿಂಗ್: ಸಿಕ್ಕಿಂ ಬಳಿಯ ಡೋಕ್ಲಾಮ್ ಪ್ರದೇಶದ ಮೇಲಿನ ಹಕ್ಕಿನ ಕುರಿತು ಚೀನಾ-ಭಾರತ-ಭೂತಾನ್ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ನಡುವಲ್ಲೇ ವಿವಾದ ಅತ್ಯಂತ ಗಂಭೀರವಾಗಿದ್ದು ಶಾಂತಿ ಬೇಕೋ ಅಥವಾ ಯುದ್ಧ ಬೇಕೋ ಎಂಬುದನ್ನು ತೀರ್ಮಾನಿಸಿ ಎಂದು ಭಾರತಕ್ಕೆ ಚೀನಾ ಹೇಳಿದೆ. 
ಭಾರತದಲ್ಲಿನ ಚೀನಾ ರಾಯಭಾರಿ ಲುವೋ ಜವೋಹ್ವಿ ವಿವಾದ ಕುರಿತಂತೆ ಮಾತನಾಡಿದ್ದು, ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ವಿವಾದ ಇತ್ಯರ್ಥಕ್ಕೆ ಯಾವ ಮಾರ್ಗ ಅನುಸರಿಸಬೇಕು ಎಂಬುದನ್ನು ಭಾರತವೇ ನಿರ್ಧರಿಸಲಿ ಎಂದು ಎಚ್ಚರಿಕೆ ನೀಡಿದ್ದಾರೆ. 
ಪ್ರಸ್ತುತ ಚೆಂಡ ಭಾರತದ ಅಂಗಳದಲ್ಲಿಯೇ ಇದ್ದು, ಶಾಂತಿ ಬೇಕೋ ಅಥವಾ ಯುದ್ಧ ಬೇಕೋ ಎಂಬುದನ್ನು ಭಾರತವೇ ನಿರ್ಧರಿಸಲಿ. ಹಲವರು ಆ ಮಾರ್ಗ, ಈ ಮಾರ್ಗ ಎಂಬೆಲ್ಲಾ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಆದರೆ ಯಾವ ಮಾರ್ಗ ಬೇಕು ಎಂಬುದನ್ನು ನಿಮ್ಮ ದೇಶದ ನೀತಿಗಳೇ ನಿರ್ಧರಿಸಬೇಕು. ಡೋಕ್ಲಾಮ್ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ವಿವಾದ ಶಾಂತಿಯುತವಾಗಿ ಇತ್ಯರ್ಥವಾಗಬೇಕು. ಅದಕ್ಕಾಗಿ ಭಾರತ ಪೂರ್ವ ಷರತ್ತಿಲ್ಲದೇ ಡೋಕ್ಲಾಮ್ ನಿಂದ ಹಿಂದಕ್ಕೆ ಸರಿಯಬೇಕು ಎಂದಿದ್ದಾರೆ. ಈ ಮೂಲಕ ವಿವಾದಿತ ಪ್ರದೇಶದಿಂದ ಭಾರತ ಶಾಂತಿಯುತವಾಗಿ ಹಿಂದೆ ಸರಿದು ಅದನ್ನು ಚೀನಾ ರಾಷ್ಟ್ರಕ್ಕೆ ಬಿಟ್ಟುಕೊಡದೆ ಹೋದರೆ ಯುದ್ಧಕ್ಕೆ ಸಿದ್ಧವಿದ್ದೇವೆಂಬ ನೇರ ಸಂದೇಶವನ್ನು ರವಾನಿಸಿದ್ದಾರೆ. 
ಗಡಿ ವಿವಾದದ ಬೆನ್ನಲ್ಲೇ ಕ್ಷಿಪಣಿಗಳನ್ನು ಹೊಂದಿರುವ ಚೀನಾದ ಜಲಾಂತರ್ಗಾಮಿ ನೌಕೆಯೊಂದು ಹಿಂದೂ ಮಹಾಸಾಗರದಲ್ಲಿ ಕಂಡು ಬಂದಿದ್ದು, ಜತೆಗೆ ಡೋಕ್ಲಾಮ್ ಬಿಕ್ಕಟ್ಟು ತಾರಕ್ಕೇರಿದೆ ಬಳಿಕ ಹಿಂದೂ ಮಹಾಸಾಗರದಲ್ಲಿ ಚೀನಾದ ಯುದ್ಧ ನೌಕೆಗಳ ಓಡಾಟವೂ ಹೆಚ್ಚಾಗಿರುವುದನ್ನು ಭಾರತೀಯ ನೌಕಾಪಡೆಯ ಸರ್ವೇಕ್ಷಣಾ ವ್ಯವಸ್ಥೆಗಳು ಪತ್ತೆ ಹಚ್ಚಿವೆ. ಇತ್ತೀಚೆಗೆ ಹಿಂದೂ ಮಹಾಸಾಗರ ವಲಯದಲ್ಲಿ ಚೀನಾ ನೌಕೆಗಳ ಓಡಾಟ ಹೆಚ್ಚಳವಾಗಿರುವುದನ್ನು ಬಾರತೀಯ ನೌಕಾಪಡೆಯ ಸರ್ವೇಕ್ಷಣಾ ಉಪಕರಣಗಳು ಗುರುತಿಸಿವೆ. 
ನಿರಂತರವಾಗಿ ಅವುಗಳ ಮೇಲೆ ನಿಗಾ ಇಟ್ಟು, ಚಲನವಲನಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಉಪಗ್ರಹಗಳು ಹಾಗೂ ದೀರ್ಘ ದೂರದ ಮೇಲೆ ಕಣ್ಣಿಡುವ ಅಮೆರಿಕ ನಿರ್ಮಿತ ಪಿ81 ಸರ್ವೇಕ್ಷಣಾ ಉಪಕರಣಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಹಿಂದೂ ಮಹಾಸಾಗರದಲ್ಲಿ ಭಾರತ, ಅಮೆರಿಕ ಹಾಗೂ ಜಪಾನ್ ನಡುವೆ ನೌಕಾ ಸಮರಾಭ್ಯಾಸ ನಡೆಯುತ್ತಿದೆ. ಅದರ ಮಲೆ ಕಣ್ಣಿಡುವ ಕೆಲಸವನ್ನೂ ಚೀನಾ ಮಾಡುತ್ತಿರಬಹುದು ಎಂದು ಕೆಲ ವರದಿಗಳು ತಿಳಿಸಿವೆ. 
ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನ ಪರಿಸ್ಥಿತಿ ಕುರಿತಂತೆ ಚೀನಾ ರಕ್ಷಣಾ ತಜ್ಞರು ಮಾತನಾಡಿದ್ದು. ಗಡಿ ವಿವಾದದಲ್ಲಿ ಭಾರತ ಹಿಂದಕ್ಕೆ ಸರಿಯದೇ ಹೋದರೆ ಚೀನಾ ಸರ್ಕಾರ ಮಿಲಿಟರಿ ಶಕ್ತಿಯನ್ನು ಬಳಕೆ ಮಾಡಲಿದೆ ಎಂದು ಎಚ್ಚರಿಸಿದ್ದಾರೆ. 
SCROLL FOR NEXT