ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಾಮ್ ನವಾಜ್
ಇಸ್ಲಾಮಾಬಾದ್: ಪನಾಮಾ ಪೇಪರ್ಸ್ ಸೋರಿಕೆ ಹಗರಣ ಸಂಬಂಧ ವಿಚಾರಣೆಗೆ ಹಾಜರಾಗಿದ್ದ ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಾಮ್ ನವಾಜ್ ಅವರಿಗೆ ಸೆಲ್ಯೂಟ್ ಹೊಡೆದ ಪೊಲೀಸ್ ಅಧಿಕಾರಿಗೆ ಲೀಗಲ್ ನೋಟಿಸ್ ಜಾರಿಯಾಗಿದೆ.
ಪನಾಮಾ ಪೇಪರ್ಸ್ ಸೋರಿಕೆ ಹಗರಣ ಸಂಬಂಧ ಇಲ್ಲಿನ ಫೆಡರಲ್ ಜ್ಯುಡೀಷಿಯಲ್ ಅಕಾಡೆಮಿಗೆ ಆಗಮಿಸಿದ್ದ ಮರ್ಯಾಮ್ ನವಾಜ್ ಅವರು, ಸುಪ್ರೀಂಕೋರ್ಟ್ ನಿಂದ ನೇಮಕಗೊಂಡಿರುವ 6 ಸದಸ್ಯರ ಜೆಐಟಿ ಎದುರು ತನಿಖೆಗೆ ಹಾಜರಾದರು.
ನಿನ್ನೆಯಷ್ಟೇ ಮರ್ಯಾಮ್ ಅವರು ಫೆಡರಲ್ ಜ್ಯೂಡೀಷಿಯಲ್ ಅಕಾಡೆಮಿಗೆ ಆಗಮಿಸುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿ ಅರ್ಸಲಾ ಸಲೀಂ ಸೆಲ್ಯೂಟ್ ಹೊಡೆದಿದ್ದರು. ಇದು ಹಲವು ಚರ್ಚೆಗಳಿಗೆ ಕಾರಣವಾಗಿದ್ದು,
ಮರ್ಯಾಮ್ ಅವರಿಗೆ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯೊಬ್ಬರು ಸೆಲ್ಯೂಟ್ ಹೊಡೆದ ಕಾರಣಕ್ಕೆ ಹೈಕೋರ್ಟ್ ವಕೀಲ ಅಮ್ನಾ ಅಲಿ ಎಂಬುವವರು ಅರ್ಸಲಾ ಸಲೀಂ ಅವರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ನಾಗರಿಕರಿಗೆ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧೀಕ್ಷಕರೊಬ್ಬರಾಗಿ, ಇಸ್ಲಾಮಾಬಾದ್ ಪೊಲೀಸ್ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಲ್ಲಿನ ತೆರಿಗೆದಾರರ ಹಣವನ್ನು ವೇತನವಾಗಿ ಪಡೆಯುತ್ತಿರುವ ನೀವು ಸರ್ಕಾರಿ ಕಚೇರಿಯಲ್ಲಿ ಸೇವೆ ಸಲ್ಲಿಸದೆ ಇರುವ ಒಬ್ಬ ಮಹಿಳೆಯಾಗಿರುವ ಮರ್ಯಾಮ್ ಅವರಿಗೆ ಯಾವ ಕಾರಣಕ್ಕಾಗಿ ಸೆಲ್ಯೂಟ್ ಹೊಡೆದಿರಿ ಎಂಬುದಕ್ಕೆ ಸ್ಪಷ್ಟನೆ ನೀಡಿ ಎಂದು ಲೀಗಲ್ ನೋಟಿಸ್ ನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಮರ್ಯಾಮ್ ಅವರಿಗೆ ಸೆಲ್ಯೂಟ್ ಹೊಡೆದ ಕಾರಣಕ್ಕೆ ಮಾಧ್ಯಮಗಳ ಮುಂದೆ 15 ದಿನಗಳೊಳಗಾಗಿ ವೈಯಕ್ತಿಕ ಕ್ಷಮೆಯಾಚಿಸುವಂದೆ ಆಗ್ರಹಿಸಿದ್ದಾರೆಂದು ತಿಳಿದುಬಂದಿದೆ.