ನರೇಂದ್ರ ಮೋದಿ ಬ್ರಿಟನ್ ಪ್ರಧಾನಿ ಥೆರೇಸಾ ಮೇ ಭೇಟಿ
ನವದೆಹಲಿ: ಜಿ-20 ಶೃಂಗಸಭೆಯ ಪಾರ್ಶ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಬ್ರಿಟನ್ ಪ್ರಧಾನಿ ಥೆರೇಸಾ ಮೇ ಅವರನ್ನು ಭೇಟಿ ಮಾಡಿದ್ದು, ಬ್ರಿಟನ್ ನಲ್ಲಿ ಆಶ್ರಯ ಪಡೆದಿರುವ ಭಾರತೀಯ ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡಬೇಕಿರುವ ಸುಸ್ತಿದಾರನ್ನು ಹಸ್ತಾಂತರಿಸಲು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಭಾರತ ಕೇಳುತ್ತಿರುವ ಸುಸ್ತಿದಾರರ ಪಟ್ಟಿಯಲ್ಲಿ ವಿಜಯ್ ಮಲ್ಯ ಪ್ರಮುಖವಾಗಿದ್ದು, ಹಸ್ತಾಂತರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದಿಂದ ಸಾಕ್ಷ್ಯಾಧಾರಗಳನ್ನು ಪಡೆದಿರುವ ಅಲ್ಲಿನ ಕೋರ್ಟ್ ನ ವಿಚಾರಣೆಯನ್ನು ಮುಂದೂಡಲಾಗಿದೆ. ಡಿ.4 ರಂದು ಮುಂದಿನ ವಿಚಾರಣೆ ನಡೆಯುವವರೆಗೂ ವಿಜಯ್ ಮಲ್ಯಾಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರ ವಕೀಲರು ನ.17 ರ ವೇಳೆಗೆ ಪ್ರಕರಣಕ್ಕೆ ಸಂಬಂಧಿಸಿದ ಅಂಶಗಳನ್ನು ಸಲ್ಲಿಕೆ ಮಾಡಬೇಕಿದ್ದು, ನ.27 ಕ್ಕೆ ಭಾರತ ಸರ್ಕಾರ ಪ್ರತಿಕ್ರಿಯೆ ನೀಡಬೇಕಾಗಿದೆ.
17 ಬ್ಯಾಂಕ್ ಗಳಿಂದ ಸಾಲ ಪಡೆದಿರುವ ವಿಜಯ್ ಮಲ್ಯ ಸುಸ್ತಿದಾರರಾಗಿದ್ದು ಬ್ರಿಟನ್ ನಲ್ಲಿ ಆಶ್ರಯ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಬ್ರಿಟನ್ ಪ್ರಧಾನಿ ಅವರ ಮುಂದಿಟ್ಟಿರುವ ಮನವಿ ಮಹತ್ವದ್ದಾಗಿದೆ.