ವಾಷಿಂಗ್ ಟನ್: ನಿರಂತರ ಎಚ್ಚರಿಕೆಗಳ ಹೊರತಾಗಿಯೂ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಕೈಗೊಳ್ಳುತ್ತಿರುವ ಕ್ರಮ ಸಮರ್ಪಕವಾಗಿಲ್ಲ ಎಂಬ ಅಭಿಪ್ರಾಯ ಜಾಗತಿಕ ಮಟ್ಟದಲ್ಲಿ ಮೂಡುತ್ತಿದ್ದು, ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿರುವ ಆರ್ಥಿಕ ನೆರವಿಗೆ ಕಠಿಣ ನಿಯಮಗಳನ್ನು ವಿಧಿಸುವ ಪ್ರಸ್ತಾವನೆಯನ್ನು ಅಮೆರಿಕ ಕಾಂಗ್ರೆಸ್ ಸಮಿತಿ ಪರಿಗಣಿಸಲಿದೆ.
2018 ರ ವಿದೇಶಿ ಕಾರ್ಯಾಚರಣೆಗಳ ಅನುದಾನ ಕರಡು ಮಸೂದೆಯಲ್ಲಿ ಪಾಕ್ ಗೆ ನೀಡಲಾಗುತ್ತಿರುವ ಆರ್ಥಿಕ ಸಹಾಯ ಮುಂದುವರೆಯಬೇಕಾದರೆ ಕಠಿಣ ನಿಯಮ, ಷರತ್ತುಗಳನ್ನು ವಿಧಿಸಬೇಕೆಂಬ ಅಂಶವನ್ನು ಸೇರಿಸಲಾಗಿದೆ. ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಸಮಾಧಾನಕರ ಬೆಳವಣಿಗೆ ದಾಖಲಿಸಿದರೆ ಮಾತ್ರ ಆರ್ಥಿಕ ನೆರವು ನೀಡುವುದನ್ನು ಮುಂದುವರೆಸಬೇಕೆಂಬ ಕಠಿಣ ಅಂಶವನ್ನು ಮಸೂದೆಯಲ್ಲಿ ಸೇರಿಸಲಾಗಿದೆ. ಮಸೂದೆಯ ಈ ಅಂಶವನ್ನು ಅಮೆರಿಕ ಕಾಂಗ್ರೆಸ್ ನ ಸಮಿತಿ ಗಂಭೀರವಾಗಿ ಪರಿಗಣಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿದೇಶಾಂಗ ಕಾರ್ಯಾಚರಣೆ ಹಾಗೂ ಸಾಮಾನ್ಯ ಯೋಜಿತ ವೆಚ್ಚಗಳಿಗಾಗಿ 47.4 ಬಿಲಿಯನ್ ಮೊತ್ತದ ಅನುದಾನ ಮೀಸಲಿಡಲು ವಿದೇಶಿ ಕಾರ್ಯಾಚರಣೆಗಳ ಅನುದಾನ ಕರಡು ಮಸೂದೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ.