ವಾಷಿಂಗ್ ಟನ್: ಚೀನಾದ ಮೇಲೆ ಕಣ್ಣಿಟ್ಟಿರುವ ಭಾರತ, ತನ್ನ ಅಣ್ವಸ್ತ್ರ ಶಸ್ತ್ರಾಗಾರವನ್ನು ಆಧುನೀಕರಣಗೊಳಿಸುತ್ತಿದೆ ಎಂದು ಅಮೆರಿಕದ ಪರಮಾಣು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಸಾಮಾನ್ಯವಾಗಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಿಂದ ತನ್ನ ಗಮನವನ್ನು ಕಮ್ಯುನಿಷ್ಟ್ ದೈತ್ಯ ಚೀನಾದತ್ತ ಕೇಂದ್ರೀಕರಿಸಿದ್ದು, ತನ್ನ ಶಸ್ತ್ರಾಗಾರವನ್ನು ಆಧುನೀಕರಣಗೊಳಿಸುತ್ತಿದೆ ಎಂದು ಅಮೆರಿಕದ ಡಿಜಿಟಲ್ ಜರ್ನಲ್ ಗೆ ಬರೆದಿರುವ ಲೇಖನದಲ್ಲಿ ಹ್ಯಾನ್ಸ್ ಎಮ್ ಕ್ರಿಸ್ಟೆನ್ಸನ್ ಹಾಗೂ ರಾಬರ್ಟ್ ಎಸ್ ನಾರ್ರಿಸ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಪ್ರಸ್ತುತ 150-200 ಅಣ್ವಸ್ತ್ರ ಸಿಡಿತಲೆಗಳಿಗಾಗಿ ಸಾಕಷ್ಟು ಪ್ಲುಟೋನಿಯಂನ್ನು ತಯಾರಿಸಿದೆ, ಆದರೆ ಈ ವರೆಗೂ 120-130 ಅಣ್ವಸ್ತ್ರ ಸಿಡಿತಲೆಗಳನ್ನು ಮಾತ್ರ ಉತ್ಪಾದಿಸಿದೆ ಎಂದು ಇಂಡಿಯನ್ ನ್ಯೂಕ್ಲಿಯರ್ ಫೋರ್ಸಸ್-2017 ಶೀರ್ಷಿಕೆಯ ಲೇಖನದಲ್ಲಿ ಹ್ಯಾನ್ಸ್ ಎಮ್ ಕ್ರಿಸ್ಟೆನ್ಸನ್ ಹಾಗೂ ರಾಬರ್ಟ್ ಎಸ್ ನಾರ್ರಿಸ್ ಹೇಳಿದ್ದಾರೆ.
ಭಾರತದ ಅಣ್ವಸ್ತ್ರ ಕಾರ್ಯತಂತ್ರ ಬದಲಾಗಿದ್ದು, ಸಾಮಾನ್ಯವಾಗಿ ಪಾಕಿಸ್ತಾನದ ಕಡೆಗೆ ಇರುತ್ತಿದ್ದ ಗಮನ ಈಗ ಚೀನಾದತ್ತ ಕೇಂದ್ರೀಕೃತವಾಗಲು ಪ್ರಾರಂಭವಾಗಿದ್ದು, ದಕ್ಷಿಣ ಭಾರತದಿಂದ ಚೀನಾವನ್ನು ಸಂಪೂರ್ಣವಾಗಿ ಟಾರ್ಗೆಟ್ ಮಾಡಬಲ್ಲ ವ್ಯವಸ್ಥೆಯನ್ನು ಆಧುನೀಕರಣಗೊಳಿಸುತ್ತಿದೆ ಎಂದು ಅಮೆರಿಕ ತಜ್ಞರು ಹೇಳಿದ್ದಾರೆ.