ಕೊಲಂಬೋ: ಲಂಕಾದ ಹಾಂಬಂಟೋಟದಲ್ಲಿ ಚೀನಾ ನಿರ್ಮಿಸಿರುವ ದಕ್ಷಿಣ ಬಂದರು ಒಪ್ಪಂದದ ಬಗ್ಗೆ ಲಂಕಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು ಪರಿಷ್ಕೃತ ಒಪ್ಪಂದಕ್ಕೆ ಲಂಕಾ ಸರ್ಕಾರ ಅನುಮೋದನೆ ನೀಡಿದೆ.
ಹಾಂಬಂಟೋಟದಲ್ಲಿ ಬಂದರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಲಂಕಾ-ಚೀನಾದ ನಡುವಿನ ಈ ಹಿಂದಿನ ಒಪ್ಪಂದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ವಿಶ್ವದ ಅತಿ ಜನನಿಬಿಡ ಹಡಗು ಮಾರ್ಗಕ್ಕೆ ಹತ್ತಿರವಿರುವ ಈ ಬಂದರು ನಿರ್ಮಾಣದ ಈ ಹಿಂದಿನ ಒಪ್ಪಂದದ ಪ್ರಕಾರ ಚೀನಾದ ಸರ್ಕಾರಿ ಸ್ವಾಮ್ಯದ ಮರ್ಚೆಂಟ್ಸ್ ಪೋರ್ಟ್ ಹೋಲ್ಡಿಂಗ್ ಶೇ.80 ರಷ್ಟು ಪಾಲನ್ನು ಹೊಂದಿತ್ತು. ಆದರೆ ಈಗ ಚೀನಾದ ಸಿಂಹಪಾಲಿಗೆ ಕತ್ತರಿ ಹಾಕುವ ನಿಟ್ಟಿನಲ್ಲಿ ಲಂಕಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪರಿಷ್ಕೃತ ಒಪ್ಪಂದದಲ್ಲಿ ಚೀನಾ ಪಾಲನ್ನು ಸೀಮಿತಗೊಳಿಸಲಾಗಿದೆ. ಭದ್ರತೆಯ ವಿಷಯದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಸುಮಾರು 1.5 ಬಿಲಿಯನ್ ಡಾಲರ್ ವೆಚ್ಚದಲ್ಲಿ ಬಂದರನ್ನು ನಿರ್ಮಿಸಿದ್ದ ಚೀನಾ ಹಾಂಬಂಟೋಟದ ಮೇಲೆ ನಿಯಂತ್ರಣ ಸಾಧಿಸಿ ನೌಕಾ ಹಡಗುಗಳಿಗೆ ಬಳಕೆ ಮಾಡಿಕೊಳ್ಳಬಹುದೆಂಬ ಆತಂಕ ಎದುರಾಗಿತ್ತು.
ಹಾಂಬಂಟೋಟದಲ್ಲಿ ಚೀನಾದ ನಿಯಂತ್ರಣ ಹೆಚ್ಚಾದರೆ ಅದನ್ನು ಚೀನಾ ತನ್ನ ಸೇನಾ ಮಹತ್ವಾಕಾಂಕ್ಷೆಗಳಿಗೆ ಬಳಸಿಕೊಳ್ಳಬಹುದೆಂದು ಭಾರತ, ಅಮೆರಿಕ, ಜಪಾನ್ ಆತಂಕ ವ್ಯಕ್ತಪಡಿಸಿದ್ದವು. ಈಗ ಈ ಆತಂಕಗಳಿಗೆ ಹಾಗೂ ತನ್ನಲ್ಲೇ ಎದುರಾಗಿದ್ದ ಅಸಮಾಧಾನಗಳಿಗೆ ಸ್ಪಂದಿಸಿರುವ ಲಂಕಾ ಸರ್ಕಾರ ಚೀನಾ ಪಾತ್ರವನ್ನು ಸೀಮಿತಗೊಳಿಸುವ ನಿಟ್ಟಿನಲ್ಲಿ ಒಪ್ಪಂದವನ್ನು ಪರಿಷ್ಕರಿಸಿದೆ.