ವಿದೇಶ

ಆಕ್ರಮಣಕಾರಿ ಶತ್ರುಗಳನ್ನು ಮಣಿಸುವ ಸಾಮರ್ಥ್ಯ ಚೀನಾ ಸೇನೆಗೆ ಇದೆ: ಕ್ಸಿ ಜಿನ್ ಪಿಂಗ್

Lingaraj Badiger
ಬೀಜಿಂಗ್: ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲೇ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಎಲ್ಲಾ ರೀತಿಯ ಆಕ್ರಮಣಕಾರಿ ಶತ್ರುಗಳನ್ನು ಸೋಲಿಸುವ ಅಗಾಧ ಸಾಮರ್ಥ್ಯವನ್ನು ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‍ಎ) ಹೊಂದಿದೆ ಎಂದು ಭಾನುವಾರ ಹೇಳಿದ್ದಾರೆ.  
ಇಂದು ಪಿಎಲ್ ಎ ನ  90ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ದೇಶದ ಬೃಹತ್ ಸೇನಾ ನೆಲೆಯಲ್ಲಿ ಚೀನಾದ ಬೃಹತ್ ಮಿಲಿಟರಿ ಪೆರೇಡ್‌ನ್ನು ವೀಕ್ಷಿಸಿ ಮಾತನಾಡಿದ ಕ್ಸಿ ಜಿನ್ ಪಿಂಗ್, ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ(ಸಿಪಿಸಿ) ಸಂಪೂರ್ಣ ನಾಯಕತ್ವವನ್ನು ಪಿಎಲ್‍ಎ ಕಡ್ಡಾಯವಾಗಿ ಅನುಸರಿಸಬೇಕು. ಹಾಗೂ ಪಕ್ಷವು ತೋರಿದ ದಿಕ್ಕಿನತ್ತ ಸಾಗಬೇಕು ಎಂದು ಹೇಳಿದರು.
ಚೀನಾ ಸೇನೆ ಪ್ರಬಲ ಮತ್ತು ಆತ್ಮವಿಶ್ವಾಸ ಹೊಂದಿರುವ ವಿಶ್ವದ ಅತ್ಯುತ್ತಮ ಸೇನಾಪಡೆಗಳಲ್ಲಿ ಒಂದಾಗಿದ್ದು, ವೈರಿಗಳನ್ನು ಮಣಿಸುವ ಸಾಮರ್ಥ್ಯ ಹೊಂದಿದೆ ಎಂದು ಚೀನಾ ಅಧ್ಯಕ್ಷರು ಹೇಳಿದ್ದಾರೆ. ಆದರೆ ಕ್ಸಿ ತಮ್ಮ ಭಾಷಣದಲ್ಲಿ ಎಲ್ಲೂ ಸಿಕ್ಕಿಂ ಗಡಿ ವಿವಾದವನ್ನು ಪ್ರಸ್ತಾಪಿಸಲಿಲ್ಲ.
1927ರ ಆಗಸ್ಟ್ 1 ರಂದು ಪಿಎಲ್‌ಎ ಆರಂಭಿಸಲಾಯಿತು. ಮಾವೋ ಜೆಡಾಂಗ್ ರಾಷ್ಟ್ರೀಯ ವಿಮೋಚನಾ ಚಳವಳಿ ಆರಂಭಿಸಿ ಇದರ ನೇತೃತ್ವ ವಹಿಸಿದ್ದರು. ಪಿಎಲ್‌ಎ ಚೀನಾ ಸರ್ಕಾರದ ನೇರ ಹಿಡಿತಕ್ಕೆ ಒಳಪಡುವುದಿಲ್ಲ. ಅದರ ಆಡಳಿತವನ್ನು ಸಿಪಿಸಿ ನಿರ್ವಹಿಸುತ್ತದೆ. ಇದರಿಂದಲೇ ಇದು ಅಪರೂಪದ ರಾಷ್ಟ್ರೀಯ ಸೇನೆ ಎನಿಸಿಕೊಂಡಿದೆ.
SCROLL FOR NEXT