ಲಂಡನ್: ಲಂಡನ್ ನ ಎರಡು ಪ್ರತಿಷ್ಟಿತ ಪ್ರದೇಶಗಳಲ್ಲಿ ಶನಿವಾರ ಏಕಕಾಲಕ್ಕೆ ನಡೆದ ಉಗ್ರ ದಾಳಿಗೆ ಸಂಬಂಧಿಸಿದಂತೆ ಬ್ರಿಟನ್ ಪೊಲೀಸರು ಭಾನುವಾರ 12 ಮಂದಿಯನ್ನು ಬಂಧಿಸಿದ್ದಾರೆ.
ಕಳೆದ ರಾತ್ರಿ ಲಂಡನ್ ಬ್ರಿಡ್ಜ್ ಮತ್ತು ಬರೋ ಮಾರ್ಕೆಟ್ ಪ್ರದೇಶದಲ್ಲಿ ನಡೆದ ಎರಡು ದಾಳಿಗೆ ಸಂಬಂಧಿಸಿದಂತೆ 12 ಮಂದಿಯನ್ನು ಬಂಧಿಸಲಾಗಿದೆ ಎಂದು ಲಂಡನ್ ಮೆಟ್ರೊಪೊಲಿಟನ್ ಪೊಲೀಸ್ ಸೇವೆ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
ನಿನ್ನೆ ರಾತ್ರಿ ಉಗ್ರರು ಲಂಡನ್ ರೈಲ್ವೆ ಬ್ರಿಡ್ಜ್ ಬಳಿ ಪಾದಾಚಾರಿಗಳ ಮೇಲೆ ಬಿಳಿ ವ್ಯಾನ್‌ನನ್ನು ಎಲ್ಲೆಂದರಲ್ಲಿ ಹರಿಸಿದ್ದರು. ಅಲ್ಲದೆ ಜನನಿಬಿಡ ಬರೋ ಮಾರ್ಕೆಟ್‌ನಲ್ಲಿ ಸಿಕ್ಕ ಸಿಕ್ಕವರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾರೆ. ಈ ಎರಡು ದಾಳಿಯಲ್ಲಿ ಏಳು ಮಂದಿ ಮೃತಪಟ್ಟಿದ್ದು, 48 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿ ನಡೆಸಿದ ಮೂವರೂ ಉಗ್ರರನ್ನು ಪೊಲೀಸರು ಗುಂಡಿಟ್ಟು ಹತ್ಯೆಗೈದಿದ್ದಾರೆ.
ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ. ಲಂಡನ್ ನಗರದಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ. ಜನರು ದಾಳಿಯಿಂದ ಕಂಗಾಲಾಗಿ ಹೋಗಿದ್ದಾರೆ.