ದೋಹಾ: ಖತಾರ್ ಮೂಲದ ಖ್ಯಾತ ಸುದ್ದಿ ಸಂಸ್ಥೆ ಅಲ್ ಝಜೀರಾ ಮೇಲೆ ಸೈಬರ್ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದ್ದು, ಸಂಸ್ಥೆಯ ವೆಬ್ ಸೈಟ್, ನೆಟ್ವರ್ಕ್ ಗಳ ಮೇಲೆ ಸೈಬರ್ ಹ್ಯಾಕರ್ಸ್ ದಾಳಿ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಸ್ವತಃ ಅಲ್ ಝಜೀರಾ ಸಂಸ್ಥೆ ಸ್ಪಷ್ಟನೆ ನೀಡಿದ್ದು, ತನ್ನ ಮೀಡಿಯಾ ನೆಟ್ವರ್ಕ್, ವೆಬ್ ಸೈಟ್ ಹಾಗೂ ಸೋಷಿಯಲ್ ಮೀಡಿಯಾಗಳ ಮೇಲೆ ಸೈಬರ್ ದಾಳಿಗೆ ಯತ್ನಿಸಲಾಗಿದೆ ಎಂದು ಹೇಳಿಕೊಂಡಿದೆ. ಸಂಸ್ಥೆಯ ಮೀಡಿಯಾ ನೆಟ್ವರ್ಕ್, ವೆಬ್ ಸೈಟ್ ಹಾಗೂ ಸೋಷಿಯಲ್ ಮೀಡಿಯಾಗಳ ಮೇಲೆ ಸೈಬರ್ ದಾಳಿಗೆ ಸತತವಾಗಿ ಯತ್ನಿಸಲಾಗುತ್ತಿದ್ದು, ದಾಳಿ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಹಲವು ಭಾಗಗಳಲ್ಲಿ ಅಲ್ ಝಜೀರಾ ಪ್ರಸಾರ ಸ್ಥಗಿತವಾಗಿದೆ ಎಂದು ಹೇಳಿದೆ.
ಖತಾರ್ ನೊಂದಿಗೆ ಗಲ್ಫ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಯುಎಇ, ಈಜಿಪ್ಟ್ ಮತ್ತು ಬಹ್ರೇನ್ ಸೇರಿದಂತೆ ಹಲವು ರಾಷ್ಟ್ರಗಳ ಮೈತ್ರಿ ಕಡಿತವಾಗ ಬೆನ್ನಲ್ಲೇ ಈ ದಾಳಿ ನಡೆದಿರುವುದು ಹಲವು ಶಂಕೆಗೆ ಕಾರಣವಾಗಿದೆ. ಅಲ್ ಝಜೀರಾ ಮೇಲಿನ ಸೈಬರ್ ದಾಳಿಯ ಹಿಂದೆ ಗಲ್ಫ್ ರಾಷ್ಟ್ರಗಳ ಕೈವಾಡದ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಶೀಘ್ರದಲ್ಲೇ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿಕೊಂಡಿದೆ. ವಿಶ್ವದ ಅತ್ಯಂತ ದೊಡ್ಡ ಸುದ್ದಿ ಸಂಸ್ಥೆಗಳಲ್ಲಿ ಅಲ್ ಝಜೀರಾ ಕೂಡ ಒಂದಾಗಿದ್ದು, ಖತಾರ್ ಮೂಲದ ಈ ಸುದ್ದಿ ಸಂಸ್ಥೆ ಸೌದಿ ಅರೇಬಿಯಾ, ಯುಎಇ, ಈಜಿಪ್ಟ್ ಮತ್ತು ಬಹ್ರೇನ್ ಹಲವು ರಾಷ್ಟ್ರಗಳಲ್ಲಿ ಪ್ರಸಾರವಾಗುತ್ತಿದೆ.