ವಿದೇಶ

ಮಿತ್ರರೊಂದಿಗೆ 'ಮೈತ್ರಿ ಸರ್ಕಾರ' ರಚನೆ: ಬ್ರಿಟನ್ ಪ್ರಧಾನಿ ಥೆರೆಸಾ ಮೇ

Lingaraj Badiger
ಲಂಡನ್: ಬ್ರಿಟನ್ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಶುಕ್ರವಾರ ಹೊರಬಿದ್ದಿದ್ದು, ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಆದರೆ ಮಿತ್ರ ಪಕ್ಷಗಳ ಜೊತೆ ಸೇರಿ ನೂತನ ಸರ್ಕಾರ ರಚಿಸುವುದಾಗಿ ಪ್ರಧಾನಿ ಥೆರೆಸಾ ಮೇ ಅವರು ಹೇಳಿದ್ದಾರೆ.
ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷಕ್ಕೆ ಭಾರಿ ಹಿನ್ನೆಡೆಯಾಗಿದ್ದು, ಥೆರೆಸಾ ಮೇ ಸರ್ಕಾರ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಆದರೂ ಮಿತ್ರ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಲು ಅನುಮತಿ ನೀಡುವಂತೆ ಬ್ರಿಟನ್ ರಾಣಿ ಎಲಿಜಬೆತ್ ಅವರಿಗೆ ಮನವಿ ಮಾಡಿದ್ದಾರೆ.
ಡೆಮಾಕ್ರಟಿಕ್ ಯೂನಿಯನಿಸ್ಟ್ ಪಾರ್ಟಿ ಸೇರಿದಂತೆ ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಥೆರೆಸಾ ಮೇ ತಿಳಿಸಿದ್ದಾರೆ. ಅಲ್ಲದೆ ಬ್ರೆಕ್ಸಿಟ್ ಮಾತುಕತೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಚುನಾವಣೆ ಫಲಿತಾಂಶದ ಬೆನ್ನಲ್ಲೇ ಬ್ರೆಕ್ಸಿಟ್ ಗೆ ಸಂಬಂಧಿಸಿದ ಮಾತುಕತೆಯನ್ನು ಆದಷ್ಟು ಬೇಗ ಆರಂಭಿಸಬೇಕು ಎಂದು ಯೂರೋಪಿಯನ್ ಒಕ್ಕೂಟ ಒತ್ತಾಯ ಮಾಡಿದೆ.
ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷ ಮತ್ತು ವಿಪಕ್ಷ ಲೇಬರ್ ಪಕ್ಷ ಸೇರಿದಂತೆ ಯಾವುದೇ ಪಕ್ಷ ಬಹುಮತ ಪಡೆದಿಲ್ಲ. ಪರಿಣಾಮ ಬ್ರಿಟನ್ ಸಂಸತ್ ಇದೀಗ ತ್ರಿಶಂಕು ಸ್ಥಿತಿಗೆ ತಲುಪಿದ್ದು, 3 ವರ್ಷಗಳ  ಮೊದಲೇ ನಡೆದ ಚುನಾವಣಾ ನಿಜಕ್ಕೂ ಪ್ರಧಾನಿ ಥೆರೆಸಾ ಮೇ ಅವರಿಗೆ ತಿರುಗುಬಾಣವಾಗಿ ಪರಿಣಮಿಸಿದೆ.
650 ಸದಸ್ಯ ಬಲದ ಬ್ರಿಟಿಷ್‌ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಈವರೆಗೂ 647 ಸ್ಥಾನಗಳ ಫ‌ಲಿತಾಂಶ  ಬಹಿರಂಗವಾಗಿದೆ. ಅದರಂತೆ ಆಡಳಿತಾ ರೂಢ ಕನ್ಸರ್ವೇಟಿವ್ ಪಕ್ಷ 316 ಸ್ಥಾನಗಳನ್ನು ಪಡೆದಿದ್ದು, ವಿಪಕ್ಷ ಲೇಬರ್ ಪಾರ್ಟಿ 261 ಸ್ಥಾನಗಳನ್ನು ಪಡೆದುಕೊಂಡಿದೆ.
SCROLL FOR NEXT