ದುಬೈ: ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಹಾಗೂ ಖತಾರ್ ನ ರಕ್ಷಣಾ ಸಚಿವ ಖಲೀದ್ ಅಲ್-ಅಟಿಯಹ್ ಎಫ್-15 ಫೈಟರ್ ಜೆಟ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಪೆಂಟಗನ್ ತಿಳಿಸಿದೆ.
ಖತಾರ್ ವಿರುದ್ಧ ಭಯೋತ್ಪಾದನೆಯ ಆರೋಪ ಹೊರಿಸಿದ್ದ ಗಲ್ಫ್ ರಾಷ್ಟ್ರಗಳು ರಾಜತಾಂತ್ರಿಕ ಸಂಬಂಧ ರದ್ದುಗೊಳಿಸಿರುವ ಬೆನ್ನಲ್ಲೇ ಖತಾರ್ ಎಫ್-15 ಫೈಟರ್ ಜೆಟ್ ಗಾಗಿ ಅಮೆರಿಕಾದೊಂದಿಗೆ ಒಪ್ಪಂದಕ್ಕೆ ಮುಂದಾಗಿದೆ. ಖತಾರ್ ನೊಂದಿಗೆ ರಾಜತಾಂತ್ರಿಕ ರದ್ದುಗೊಳಿಸುವ ಸೌದಿ ನೇತೃತ್ವದ ನಿರ್ಧಾರಕ್ಕೆ ಬೆಂಬಲ ನೀಡುವ ಸೂಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದರು. ಆದರೆ ಅಮೆರಿಕದ ಅಧಿಕಾರಿಗಳು ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ನಿಭಾಯಿಸಲು ನಿರ್ಧರಿಸಿದ್ದು, ಮಾತುಕತೆ ಮೂಲಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಕರೆ ನೀಡಿದ್ದಾರೆ.
ಈ ಒಪ್ಪಂದದಿಂದ ಅಮೆರಿಕ ಹಾಗೂ ಖತಾರ್ ನಡುವಿನ ಭದ್ರತಾ ಸಹಕಾರ ಮತ್ತಷ್ಟು ಹೊಸ ಎತ್ತರಕ್ಕೆ ಬೆಳೆಯಲಿದೆ ಎಂದು ಪೆಂಟಗನ್ ಹೇಳಿಕೆ ಬಿಡುಗಡೆ ಮಾಡಿದೆ. ಒಪ್ಪಂದಕ್ಕೆ ಸಹಿ ಹಾಕುವುದಕ್ಕೂ ಮುನ್ನ ಅಮೆರಿಕ ರಕ್ಷಣಾ ಕಾರ್ಯದರ್ಶಿ ಹಾಗೂ ಖತಾರ್ ನ ರಕ್ಷಣಾ ಕಾರ್ಯದರ್ಶಿಗಳು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.