ಹೂಸ್ಟನ್(ಯುಎಸ್ಎ): ಸಾರಿಗೆ ಇಂಧನವಾಗಿ ದ್ರವೀಕೃತ ನೈಸರ್ಗಿಕ ಅನಿಲವನ್ನು(ಎಲ್ಎನ್ ಜಿ) ಬಳಸಲು ಭಾರತ ಸರ್ಕಾರ ಒಲವು ತೋರುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಧರ್ಮೇಂದ್ರ ಪ್ರದಾನ್ ಹೇಳಿದ್ದಾರೆ. ಅವರು ಹೂಸ್ಟನ್ ನಲ್ಲಿ ಅಂತಾರಾಷ್ಟ್ರೀಯ ತೈಲ ಮತ್ತು ಅನಿಲ ಸಮ್ಮೇಳನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಭಾರತದಲ್ಲಿ ದ್ರವೀಕೃತ ನೈಸರ್ಗಿಕ ಅನಿಲವನ್ನು ಸಾರಿಗೆ ಇಂಧನವನ್ನಾಗಿ ಬಳಸುವ ಮಹಾತ್ವಾಕಾಂಕ್ಷಿ ಯೋಜನೆ ಸರ್ಕಾರದ ಮುಂದಿದೆ. ಈ ಬಗ್ಗೆ ಸದ್ಯದಲ್ಲಿಯೇ ಅಧಿಸೂಚನೆ ಹೊರಡಿಸಲಾಗುವುದು ಎಂದರು.
ಸಭೆಯ ಅಂಗವಾಗಿ ಸಾರ್ವಜನಿಕ ತೈಲ ಮತ್ತು ಅನಿಲ ಕಂಪೆನಿಗಳ ಅಧಿಕಾರಿಗಳೊಂದಿಗೆ ಹೂಸ್ಟನ್ ಗೆ ತೆರಳಿರುವ ಪ್ರದಾನ್ ಕೆನಡಾ, ಯುನೈಟೆಡ್ ಅರಬ್ ದೇಶ, ಇಸ್ರೇಲ್, ಯುಎಸ್ಎ, ನೈಜೀರಿಯಾ, ಸೌದಿ ಅರೇಬಿಯಾ, ರಷ್ಯಾ ದೇಶಗಳ ಪೆಟ್ರೋಲಿಯಂ ಖಾತೆ ಸಚಿವರು ಮತ್ತು ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.