ವಿದೇಶ

ಋಷಿಕೇಶದ ಯೋಗ ಗುರುಗಳಿಗೆ ಚೀನಾದಲ್ಲಿ ಭಾರಿ ಬೇಡಿಕೆ!

Srinivas Rao BV
ಬೀಜಿಂಗ್: ಋಷಿಕೇಶ ಭಾರತೀಯ ಯೋಗದ ರಾಜಧಾನಿಯೆಂದೇ ಪ್ರಸಿದ್ಧಿ. ಈಗ ಇದೇ ರಾಜಧಾನಿಯಿಂದ ತಯಾರಾದ ಯೋಗ ಗುರುಗಳಿಗೆ ಆಗ್ನೇಯ ಏಷ್ಯಾ ಹಾಗೂ ಚೀನಾದಿಂದ ಭಾರಿ ಬೇಡಿಕೆ ಇದೆ. 
ಭಾರತೀಯ ಯೋಗ ಗುರುಗಳಿಗೆ ಚೀನಾದಲ್ಲಿ ಅತಿ ಹೆಚ್ಚಿನ ಬೇಡಿಕೆ ಇದ್ದು, ಕನಿಷ್ಠ 1,500 ಭಾರತೀಯ ಯೋಗ ಗುರುಗಳು ಚೀನಾದಲ್ಲಿ ಯೋಗ ಪಾಠ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪೈಕಿ ಶೇ.70-80 ರಷ್ಟು ಯೋಗ ಗುರುಗಳು ಋಷಿಕೇಶ, ಹರಿದ್ವಾರದಲ್ಲಿ ಯೋಗ ಶಿಕ್ಷಣ ಪಡೆದು ತಯಾರಾದವರಾಗಿದ್ದು ಭಾರತೀಯ ಪುರಾತನ ವಿದ್ಯೆಯನ್ನು ಕರಗತ ಮಾಡಿಕೊಂಡವರಾಗಿದ್ದಾರೆ. 
ಚೀನಾದಲ್ಲಿ ಸುಮಾರು ಒಂದು ದಶಕದಿಂದ ಯೋಗ ಕಲಿಕೆಯಲ್ಲಿ ನಿರತರಾಗಿರುವ ಆಶೀಶ್ ಬಹುಗುಣಾ ಅವರಿಗೆ "ದಿ ಮೋಸ್ಟ್ ಬ್ಯೂಟಿಫುಲ್ ಯೋಗಿ ಆಫ್ ಚೀನಾ" ಬಿರುದು ನೀಡಲಾಗಿದ್ದು, ಋಷಿಕೇಶದಲ್ಲಿರುವ ಪರಮಾರ್ಥ ನಿಕೇತನ್ ಆಶ್ರಮದಲ್ಲಿ ಯೋಗ ಕಲಿತವರಾಗಿದ್ದಾರೆ. 
ಚೀನಾದಲ್ಲಿ ಯೋಗ ಕಲಿಸಲು ಬಹಳ ಮಂದಿ ಇದ್ದಾರೆ. ಆದರೆ ಭಾರತೀಯರಿಗೆ ಇಲ್ಲಿನ ಜನತೆ ಹೆಚ್ಚು ಆದ್ಯತೆ ನೀಡುತ್ತಾರೆ ಎಂದು ಚೀನಾದ ಬೀಜಿಂಗ್ ನಲ್ಲಿ ವಿ ’ಯೋಗಾ’ ('WeYoga') ಎಂಬ ಸ್ಟುಡಿಯೋ ನಡೆಸುತ್ತಿರುವ ಬಹುಗುಣಾ ಹೇಳಿರುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು 2009 ರಲ್ಲಿ 1.1 ಲಕ್ಷ ಇದ್ದ ಯೋಗ ಗುರುಗಳ ಸಂಖ್ಯೆ 2014 ರ ವೇಳೆಗೆ 2.3 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ. 
SCROLL FOR NEXT