ಪೇಶಾವರ: ಪಾಕಿಸ್ತಾನದ ಬುಡಕಟ್ಟು ಶಿಯಾ ಜನರು ಹೆಚ್ಚಾಗಿರುವ ಮಾರುಕಟ್ಟೆ ಮೇಲೆ ನಡೆದ ಕಾರ್ ಬಾಂಬ್ ದಾಳಿಯಲ್ಲಿ ಇಂದು ಕನಿಷ್ಠ 22 ಮಂದಿ ಸಾವಿಗೀಡಾಗಿ 50 ಮಂದಿ ಗಾಯಗೊಂಡಿದ್ದಾರೆ.
ಕುರ್ರಮ್ ಬುಡಕಟ್ಟು ಜಿಲ್ಲೆಯ ರಾಜಧಾನಿ ಪರಚಿನಾರ್ ನಲ್ಲಿ ಈ ದಾಳಿ ನಡೆದಿದ್ದು ಗಾಯಗೊಂಡವರನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಲಾಗುತ್ತಿದೆ. ಕಾರ್ ಬಾಂಬ್ ದಾಳಿ ನಡೆದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸೇರಿದ್ದ ಜನರು ಭೀತಿಯಿಂದ ದಿಕ್ಕು ಪಾಲಾಗಿ ಓಡುವುದು, ಅರಚುವ ದೃಶ್ಯ ಟಿವಿ ವಾಹಿನಿಗಳಲ್ಲಿ ದಾಖಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನದಾದ್ಯಂತ ನಡೆದ ಮಿಲಿಟರಿ ಹಿಂಸಾಚಾರದಲ್ಲಿ 130 ಜನ ಮೃತಪಟ್ಟಿದ್ದರು. ಜನರು ಸುರಕ್ಷತೆಯನ್ನು ಹೆಚ್ಚಿಸಬೇಕೆಂದು ಮತ್ತು ಸೇನಾ ಶಿಸ್ತುಕ್ರಮಕ್ಕೆ ಒತ್ತಾಯಿಸಿದ್ದರು.
11 ಮಂದಿ ಇಲ್ಲಿಯವರೆಗೆ ಮೃತಪಟ್ಟು 50 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆಡಳಿತ ಅಧಿಕಾರಿ ಶಾಹಿದ್ ಆಲಿ ಖಾನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇದೊಂದು ಕಾರ್ ಬಾಂಬ್ ದಾಳಿಯಾಗಿದ್ದು ಮಾರುಕಟ್ಟೆ ಬಳಿ ಕಾರನ್ನು ನಿಲುಗಡೆ ಮಾಡಲಾಗಿತ್ತು. ಇದೊಂದು ಆತ್ಮಹತ್ಯಾ ಬಾಂಬ್ ದಾಳಿ ಹೌದೇ, ಅಲ್ಲವೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ.