ವಿದೇಶ

ಪ್ರಯಾಣಿಕರ ಜೀವ ಪಣಕ್ಕಿಟ್ಟು ಬರೊಬ್ಬರಿ 2 ಗಂಟೆ ನಿದ್ರಿಸಿದ ಪಾಕಿಸ್ತಾನ ಪೈಲಟ್ !

Srinivasamurthy VN

ಇಸ್ಲಾಮಾಬಾದ್: 305 ಮಂದಿ ಪ್ರಯಾಣಿಕರಿದ್ದ ವಿಮಾನ ಆಗಸದಲ್ಲಿರುವಾಗಲೇ ವಿಮಾನದ ಪೈಲಟ್ ಸುಮಾರು 2 ಗಂಟೆಗಳ ಕಾಲ ನಿದ್ರೆಗೆ ಜಾರಿದ್ದ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ)ನ ಇಸ್ಲಾಮಾಬಾದ್-ಲಂಡನ್ ವಿಮಾನದ ಪೈಲಟ್ ವಿಮಾನ ಆಗಸದಲ್ಲಿ ಹಾರಾಟ ನಡೆಸುತ್ತಿದ್ದಾಗಲೇ ಸುಮಾರು ಎರಡೂವರೆ ಗಂಟೆಗಳ ಕಾಲ ನಿದ್ರಿಸಿ ಪ್ರಯಾಣಿಕರ  ಜೀವಗಳನ್ನು ಅಪಾಯಕ್ಕೊಡ್ಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ ಈ ಘಟನೆ ಎಪ್ರಿಲ್‌ನಲ್ಲಿ ನಡೆದಿದ್ದು,  ಪಿಐಎನ ವಿಮಾನದ ಪೈಲಟ್  ಅಮೀರ್ ಅಖ್ತರ್ ಹಶ್ಮಿ ವಿಮಾನ ಹಾರಾಟ ಆರಂಭಿಸಿದ ಕೂಡಲೇ  ವಿಮಾನದ ನಿಯಂತ್ರಣವನ್ನು ತರಬೇತಿ ಪಡೆಯುತ್ತಿರುವ ಪೈಲಟ್‌ ಗೆ ಒಪ್ಪಿಸಿ ಪ್ರಯಾಣಿಕರ ಬಸಿನೆಸ್ ಕ್ಲಾಸ್ ಸೀಟಿನಲ್ಲಿ ನಿದ್ರೆಗೆ ಜಾರಿದ್ದ.

ಕಳೆದ ಏಪ್ರಿಲ್ 26ರಂದು ಇಸ್ಲಾಮಾಬಾದ್‌ನಿಂದ ಲಂಡನ್‌ಗೆ ಹೊರಟ ಪಿಕೆ-785 ವಿಮಾನದ ಹಾರಾಟ ಉಸ್ತುವಾರಿಯನ್ನು ಹಶ್ಮಿ ವಹಿಸಿದ್ದರು. ಅವರ ಸಹಾಯಕರಾಗಿ ಫಸ್ಟ್ ಆಫಿಸರ್ ಅಲಿ ಹಸನ್ ಯಾಝ್ದನಿ ಇದ್ದರು. ತರಬೇತಿ  ಪಡೆಯುತ್ತಿದ್ದ ಇನ್ನೋರ್ವ ಫಸ್ಟ್ ಆಫಿಸರ್ ಮುಹಮ್ಮದ್ ಅಸಾದ್ ಅಲಿ ಕೂಡ ಕಾಕ್‌ ಪಿಟ್‌ ನಲ್ಲಿದ್ದರು. ಆ ವಿಮಾನ ಹಾರಾಟದ ವೇಳೆ, ಅಲಿ ಹಸನ್‌ ಗೆ ಹಶ್ಮಿ ತರಬೇತಿ ನೀಡಬೇಕಾಗಿತ್ತು. ಆದರ ತರಬೇತಿ ನೀಡುವ ಬದಲಿಗೆ ಪೈಲಟ್  ನಿದ್ರೆಗೆ ಜಾರುವ ಮೂಲಕ ವಿಮಾನ ಮತ್ತು ಅದರೊಳಗಿದ್ದ 305 ಮಂದಿ ಪ್ರಯಾಣಿಕರ ಪ್ರಾಣವನ್ನು ಅಪಾಯದಲ್ಲಿಟ್ಟಿದ್ದರು.

ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಪೈಲಟ್ ನ ಈ ಅಜಾಗರೂಕ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಿಐಎ ವಿಮಾನಯಾನ ಸಂಸ್ಥೆ ಪೈಲಟ್ ಅಮೀರ್ ಅಖ್ತರ್ ಹಶ್ಮಿ ಹುದ್ದೆಯಿಂದ ತೆರವುಗೊಳಿಸಿದೆ.

ವಿಪರ್ಯಾಸವೆಂದರೆ ಅಮಾನತುಗೊಂಡ ಪೈಲಟ್ ಹಶ್ಮಿ ಪಿಎಎಲ್‌ಪಿಎ (ಪಾಕಿಸ್ತಾನ್ ಏರ್‌ಲೈನ್ಸ್ ಪೈಲಟ್ಸ್ ಅಸೋಸಿಯೇಶನ್) ಅಧ್ಯಕ್ಷನಾಗಿದ್ದು, ಈ ಕಾರಣಕ್ಕೆ ಆರಂಭಿಕ ಹಂತದಲ್ಲಿ ಸಂಸ್ಥೆ ಈತನ ವಿರುದ್ಧ ಕ್ರಮ ಕೈಗೊಳ್ಳಲು  ಹಿಂದೇಟು ಹಾಕಿತ್ತು. ಬಳಿಕ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೈಲಟ್ ಹಶ್ಮಿಯನ್ನು ವಜಾಗೊಳಿಸಿದೆ.

ಪ್ರಸ್ತುತ ಆರೋಪಿತ ಪೈಲಟ್ ವಿರುದ್ಧ ತನಿಖೆ ನಡೆಸಲಾಗುತ್ತಿದ್ದು, ತನಿಖೆ ಪ್ರಗತಿಯಲ್ಲಿರುವುದರಿಂದ ಹಶ್ಮಿಯನ್ನು ವಿಮಾನ ಹಾರಾಟ ಕೆಲಸದಿಂದ ಹೊರಗಿಡಲಾಗಿದೆ ಎಂದು ಪಿಐಎ ವಕ್ತಾರ ದನ್ಯಾಲ್ ಗಿಲಾನಿ ತಿಳಿಸಿದರು.

SCROLL FOR NEXT