ಅಮೆರಿಕಾದ ವೈದ್ಯ ರಮೇಶ್ ಕುಮಾರ್
ವಾಷಿಂಗ್ ಟನ್: ಅಮೆರಿಕಾದಲ್ಲಿ ಮತ್ತೋರ್ವ ಭಾರತೀಯನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಭಾರತೀಯ ಅಮೆರಿಕಾದ ವೈದ್ಯ ರಮೇಶ್ ಕುಮಾರ್ ಹತ್ಯೆಗೀಡಾಗಿದ್ದಾರೆ.
ಮಿಚಿಗನ್ ರಾಜ್ಯದ ಹೆನ್ರಿ ಫೋರ್ಡ್ ಆಸ್ಪತ್ರೆಯಲ್ಲಿ ಯುರಾಲಜಿ ವಿಭಾಗದ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಕುಮಾರ್, ಕಾರೊಂದರಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಕುಟುಂಬ ಸದಸ್ಯರು ರಮೇಶ್ ಕುಮಾರ್ ಹತ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹಳೆ ವೈಷಮ್ಯದಿಂದ ಹತ್ಯೆಗೀಡಾಗಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. "ನಮಗೆ ಹತ್ಯೆಯ ಹಿಂದಿರುವ ಕಾರಣ ತಿಳಿದಿಲ್ಲ. ಪೊಲೀಸರ ತನಿಖೆ ಮೂಲಕ ತಿಳಿಯಬೇಕಿದೆ". ಎಂದು ಡಾ.ರಮೇಶ್ ಕುಮಾರ್ ಅವರ ತಂದೆ ನರೇಂದ್ರ ಕುಮಾರ್ ಹೇಳಿದ್ದಾರೆ.
ಕೊಚ್ಚಿಯ ಅಮೃತ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ವೈದ್ಯಕೀಯ ಪದವಿ ಪಡೆದಿದ್ದ ಡಾ. ರಮೇಶ್ ಕುಮಾರ್, ಕೆಲಸಕ್ಕೆ ಬಾರದೇ ಇದ್ದ ಹಿನ್ನೆಯಲ್ಲಿ ಮನೆಗೆ ಕರೆ ಮಾಡಿ ವಿಚಾರಿಸಿದ್ದಾರೆ. ರಮೇಶ್ ಕುಮಾರ್ ಕೆಲಸಕ್ಕೆ ಹೋಗದೇ ಇದ್ದದ್ದು ಅಸಹಜವಾಗಿದ್ದರಿಂದ ಕುಟುಂಬ ಸದಸ್ಯರು ಕರೆ ಮಾಡಿದ್ದಾರೆ. ಆದರೆ ಪ್ರತಿಕ್ರಿಯೆ ಬಂದಿಲ್ಲ. ಮಗ ವಾಸವಿದ್ದ ಅಪಾರ್ಟ್ ಮೆಂಟ್ ಗೆ ಪೋಷಕರು ತೆರಳಿದ್ದಾರೆ. ಆದರೆ ರಮೇಶ್ ಕುಮಾರ್ ಅಲ್ಲಿಯೂ ಇರಲಿಲ್ಲವಾದ್ದರಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ಶೋಧ ಕಾರ್ಯ ನಡೆಸಿದ ಪೊಲೀಸರಿಗೆ ಹಲವು ಗಂಟೆಗಳ ನಂತರ ಕಾರೊಂದರ ಪ್ಯಾಸೆಂಜರ್ ಸೀಟ್ ನಲ್ಲಿ ರಮೇಶ್ ಕುಮಾರ್ ಶವ ಪತ್ತೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಭಾರತೀಯ ಸಮುದಾಯದವರ ಮೇಲೆ ಅಮೆರಿಕಾದಲ್ಲಿ ನಡೆಯುತ್ತಿರುವ ಹಲ್ಲೆ ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಭಾರತೀಯ ಮೂಲದ ಇಂಜಿನಿಯರ್ ಶ್ರೀನಿವಾಸ್ ಎಂಬುವವರನ್ನು ಸಹ ಹತ್ಯೆ ಮಾಡಲಾಗಿತ್ತು.