ವಿದೇಶ

ಮ್ಯಾಂಚೆಸ್ಟರ್ ಆತ್ಮಾಹುತಿ ಬಾಂಬ್ ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್

Lingaraj Badiger
ಮ್ಯಾಂಚೆಸ್ಟರ್: ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್ ಮತ್ತು ಸಿರಿಯಾ(ಐಎಸ್ಐಎಸ್) 22 ಮಂದಿಯನ್ನು ಬಲಿ ಪಡೆದ ಮ್ಯಾಂಚೆಸ್ಟರ್​ನ ಅರೇನಾ ಸ್ಟೇಡಿಯಂನ ಉಗ್ರ ದಾಳಿಯ ಹೊಣೆ ಹೊತ್ತುಕೊಂಡಿದೆ. 
ಕಳೆದ ರಾತ್ರಿ ಮ್ಯಾಂಚೆಸ್ಟರ್​ನ ಅರೇನಾ ಸ್ಟೇಡಿಯಂನಲ್ಲಿ ಆತ್ಮಾಹುತಿ ಬಾಂಬ್ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡ ಪರಿಣಾಮ ಮಕ್ಕಳು, ಮಹಿಳೆಯರು ಸೇರಿದಂತೆ ಒಟ್ಟು 22 ಮಂದಿ ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಕಳೆದ 12 ವರ್ಷಗಳಲ್ಲಿ ನಡೆದಿರುವ ಅತಿ ಭೀಕರ ಸ್ಫೋಟ ಇದಾಗಿದೆ.
ಸೋಮವಾರ ರಾತ್ರಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಯುವ ಅಭಿಮಾನಿಗಳೇ ಭಾಗವಹಿಸಿದ್ದರು. ಸ್ಫೋಟ ನಡೆದ ಕೂಡಲೇ ಸ್ಟೇಡಿಯಂ ನಿಂದ ಹೆದರಿ ದಿಕ್ಕಾಪಾಲಾಗಿ ಓಡಿದ್ದರು.
ನನ್ನ ಕತ್ತಿಗೆ ಬಿಸಿ ತಾಕಿತು, ನಾನು ಅಲ್ಲಿ ತಿರುಗಿ ನೋಡಿದಾಗಿ ಎಲ್ಲೆಂದರಲ್ಲಿ ಮನುಷ್ಯರ ಶವಗಳು ಬಿದ್ದಿದ್ದವು ಎಂದು ತಮ್ಮ 17 ವರ್ಷದ ಮೊಮ್ಮಗಳಿಗಾಗಿ ಕಾಯುತ್ತಿದ್ದ ಪ್ರತ್ಯಕ್ಷದರ್ಶಿ ಎಲೆನ್ ಸೆಮಿನೋ ಹೇಳಿದ್ದಾರೆ. 
ಸುಮಾರು 21 ಸಾವಿರ ಮಂದಿ ಕೂರಲು ಈ ಸ್ಟೇಡಿಯಂನಲ್ಲಿ ಅವಕಾಶವಿದೆ. ನಾವು ಕ್ರೀಡಾಂಗಣದಿಂದ ಹೊರಗೆ ಬರುತ್ತಿದ್ದ ಸಂದರ್ಭದಲ್ಲಿ ಭಾರೀ ಸ್ಪೋಟದ ಸದ್ದು ಕೇಳಿಸಿತು. ಅದರ ಬೆನ್ನಲ್ಲೇ ಜನರು ಭಯಭೀತರಾಗಿ ಓಡುತ್ತಿದ್ದರು ಮತ್ತು ಗಾಯಗೊಂಡವರ ನರಳಾಟ ಕೇಳಿ ಬರುತ್ತಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಸ್ಫೋಟದ ರೂವಾರಿ ಆತ್ಮಹತ್ಯಾ ಬಾಂಬರ್ ಕೂಡ ಮೃತಪಟ್ಟಿದ್ದಾನೆ. ಭಯೋತ್ಪಾದಕ ಕೃತ್ಯಕ್ಕೆ ಇಸೀಸ್ ಉಗ್ರ ಸಂಘಟನೆ ಸೇರಿದಂತೆ ಯಾವುದೇ  ಉಗ್ರ ಸಂಘಟನೆ ಹೊಣೆ ಹೊತ್ತಿಲ್ಲ.
ಸ್ಥಳಕ್ಕೆ ಬಂದ ಆಂಬುಲೆನ್ಸ್ ಹಾಗೂ ಬಾಂಬ್ ನಿಷ್ಕ್ರಿಯ ದಳ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿವೆ, ಗಾಯಕಿ ಅರಿಯಾನಾ ಗ್ರಾಂಡೆ ಅವರು ಸುರಕ್ಷಿತವಾಗಿದ್ದಾರೆ. 
ಬ್ರಿಟನ್ ಪ್ರಧಾನಿ ತೆರೇಸಾ ಮೇ ಉಗ್ರರ ದುಷ್ಕೃತ್ಯವನ್ನು ಖಂಡಿಸಿದ್ದು, ತುರ್ತು ಸಭೆಗೆ ಕರೆ ನೀಡಿದ್ದಾರೆ. ಜತೆಗೆ ತಮ್ಮ ಪಕ್ಷದ ಚುನಾವಣಾ ಪ್ರಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸೂಚಿಸಿದ್ದಾರೆ.
SCROLL FOR NEXT