ಕೈರೊ: ದಕ್ಷಿಣ ಈಜಿಪ್ಟ್ ನ ಕೈರೊದಲ್ಲಿ ಮುಸುಕುಧಾರಿ ಉಗ್ರನೊಬ್ಬ ಶುಕ್ರವಾರ ಕ್ರೈಸ್ತರು ಪ್ರಯಾಣಿಸುತ್ತಿದ್ದ ಬಸ್‌ನ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಹಲವು ಮಕ್ಕಳು ಸೇರಿದಂತೆ ಕನಿಷ್ಠ 26 ಮಂದಿ ಮೃತಪಟ್ಟಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಆಂತರಿಕ ಸಚಿವಾಲಯ ತಿಳಿಸಿದೆ.
ಬಸ್ ದಕ್ಷಿಣ ಕೈರೋದಿಂದ 250 ಕಿ.ಮೀ. ದೂರದಲ್ಲಿನ ಮಿನ್ಯಾ ಗವರ್ನರೇಟ್‌ನ ಅನ್ಬೇ ಸಾಮ್ಯುಲ್‌ಗೆ ಚರ್ಚ್‌ಗೆ ತೆರಳುತ್ತಿದ್ದ ವೇಳೆ ಉಗ್ರನೊಬ್ಬ ಗುಂಡಿನ ದಾಳಿ ನಡೆಸಿದ್ದು, ಇದುವರೆಗೂ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ ಇಸ್ಲಾಮಿಕ್ ಸ್ಟೇಟ್ ಈ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ಡಿಸೆಂಬರ್ ನಿಂದ ಈಜಿಪ್ಟ್ ನಲ್ಲಿ ಕ್ರೈಸ್ತರ ಮೇಲೆ ನಡೆಯುತ್ತಿರುವ ನಾಲ್ಕನೆ ದಾಳಿ ಇದಾಗಿದೆ.
ಸ್ಥಳಕ್ಕೆ ಭದ್ರತಾ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.