ನಿರಾಶ್ರಿತರಿಗೆ ಆಹಾರ ಒದಗಿಸಲು ಸಹಾಯ ಮಾಡುತ್ತಿರುವ ಭಾರತೀಯ ನೌಕಾದಳ ತಂಡ
ಕೊಲಂಬೊ: ಶ್ರೀಲಂಕಾದ ನೆರೆ ಪೀಡಿತ ಪ್ರದೇಶಗಳ ಜನರ ನೆರವಿಗೆ ಅಲ್ಲಿನ ಅಧಿಕಾರಿಗಳೊಂದಿಗೆ ಭಾರತೀಯ ನೌಕಾದಳ ತಂಡ ನೆರವಿಗೆ ಮುಂದಾಗಿದೆ. 2003ರಿಂದೀಚೆಗೆ ಈ ವರ್ಷವೇ ದೇಶದಲ್ಲಿ ಅತ್ಯಂತ ಧಾರಾಕಾರ ಮಳೆ ಉಂಟಾಗಿದ್ದು ಪ್ರವಾಹಕ್ಕೆ ಮೃತಪಟ್ಟವರ ಸಂಖ್ಯೆ 193ಕ್ಕೇರಿದೆ.
ವ್ಯತಿರಿಕ್ತ ಹವಾಮಾನ ಪರಿಸ್ಥಿತಿಯಿಂದಾಗಿ 112 ಮಂದಿ ಗಾಯಗೊಂಡಿದ್ದು ಸುಮಾರು 6,00,000 ಜನರು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರವಾಹ ಮುಳುಗುವಿಕೆ ಮತ್ತು ಭೂಕುಸಿತಗಳಿಂದ ಸಾವಿರಾರು ಮನೆಗಳು ನಾಶವಾಗಿವೆ.
ಭಾರತ ಖಂಡದ 300ಕ್ಕೂ ಹೆಚ್ಚು ನೌಕಾಪಡೆ ಸಿಬ್ಬಂದಿ ಶ್ರೀಲಂಕಾ ನಾಗರಿಕರಿಗೆ ಪರಿಹಾರ, ಪುನರ್ವಸತಿ ಕಾರ್ಯಗಳಿಗೆ ನೆರವಾಗುತ್ತಿದೆ. ವೈದ್ಯಕೀಯ ತಂಡ ಕೂಡ ತೆರಳಿದೆ.
ಐಎನ್ಎಸ್ ಶಾರ್ದೂಲದಲ್ಲಿ ಸುಮಾರು 200 ಸಿಬ್ಬಂದಿಗಳ ತಂಡವಿದ್ದು ವಿಶೇಷ ರಕ್ಷಣಾ, ಡೈವಿಂಗ್ ಮತ್ತು ವೈದ್ಯಕೀಯ ತಂಡಗಳು ತೆರಳಿವೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ದೋಣಿ, ಹಡಗುಗಳ ಮೂಲಕ ಕರೆದೊಯ್ಯಲಾಗುತ್ತಿದೆ. ಭಾರತೀಯ ನೌಕಾ ಪಡೆ ಸಿಬ್ಬಂದಿ ನಿರಾಶ್ರಿತರ ಶಿಬಿರದಲ್ಲಿರುವ ಜನರಿಗೆ ಆಹಾರಗಳನ್ನು ಪೂರೈಕೆ ಮಾಡುತ್ತಿವೆ. ಐಎನ್ಎಸ್ ಕಿರ್ಚ್ ನಲ್ಲಿ ಸುಮಾರು 125 ಮಂದಿ ಸಿಬ್ಬಂದಿಯಿದ್ದಾರೆ.